ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್‌ನ ಹೆಮ್ಮೆಯ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಬ್ಲಾಕ್‌ಬಸ್ಟರ್ ಸೃಷ್ಟಿ, ‘ಬಾಹುಬಲಿ’ ಸರಣಿಯ ಎರಡೂ ಭಾಗಗಳಾದ ಪಾರ್ಟ್-1 ಮತ್ತು ಪಾರ್ಟ್-2 ಗಳನ್ನು ಒಗ್ಗೂಡಿಸಿ, ಇದೀಗ ‘ಬಾಹುಬಲಿ ದಿ ಎಪಿಕ್’ ಎಂಬ ಹೊಸ ರೂಪದಲ್ಲಿ ಪ್ರೇಕ್ಷಕರಿಗೆ ವಿಶೇಷ ಅನುಭವ ನೀಡಲು ಸಿದ್ಧವಾಗಿದೆ.
ಬಾಹುಬಲಿ ಸಿನೆಮಾ ತೆರೆಕಂಡು 10 ವರ್ಷಗಳು ಸಂದಿರುವ ಹಿನ್ನೆಲೆಯಲ್ಲಿ, ಈ ಮಹಾಕಾವ್ಯವನ್ನು ಮರು-ಬಿಡುಗಡೆ ಮಾಡಲಾಗುತ್ತಿದೆ. ಭಾರತದಾದ್ಯಂತ ಈ ವಿಶೇಷ ಆವೃತ್ತಿಯು ಅಕ್ಟೋಬರ್ 31 ರಂದು ರಿಲೀಸ್ ಆಗಿದ್ದು, ದೊಡ್ಡ ಮಟ್ಟದ ಗಮನ ಸೆಳೆದಿತ್ತು. ಇದೀಗ, ಈ ಯಶಸ್ವಿ ಪಯಣ ಏಷ್ಯಾದ ಇನ್ನೊಂದು ಭಾಗವಾದ ಜಪಾನ್‌ಗೂ ವಿಸ್ತರಿಸಿದೆ.
ದೊಡ್ಡ ತಾರಾಗಣ ಒಳಗೊಂಡಿರುವ ಈ ಚಿತ್ರ ಡಿಸೆಂಬರ್ 12 ರಂದು ಜಪಾನ್‌ನಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ. ‘ಬಾಹುಬಲಿ ದಿ ಎಪಿಕ್’ ಚಿತ್ರದಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ರಮ್ಯಾಕೃಷ್ಣ, ಅನುಷ್ಕಾ ಶೆಟ್ಟಿ, ತಮನ್ನಾ ಭಾಟಿಯಾ, ಸತ್ಯರಾಜ್ ಸೇರಿದಂತೆ ಬಹುದೊಡ್ಡ ಕಲಾವಿದರ ದಂಡೇ ಇದೆ. ಚಿತ್ರದ ಪ್ರಚಾರ ಕಾರ್ಯ ಹಾಗೂ ಪ್ರೀಮಿಯರ್ ಶೋನಲ್ಲಿ ನಟ ಪ್ರಭಾಸ್ ಸಹ ಖುದ್ದಾಗಿ ಭಾಗವಹಿಸಲಿದ್ದಾರೆ ಎನ್ನುವುದು ಅಭಿಮಾನಿಗಳಿಗೆ ಇನ್ನಷ್ಟು ಸಂತಸದ ಸುದ್ದಿ.
ಇತ್ತ, ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಪ್ರಸ್ತುತ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರೊಂದಿಗಿನ ಮಹತ್ವಾಕಾಂಕ್ಷೆಯ ಹೊಸ ಸಿನಿಮಾ ಯೋಜನೆಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಈ ಹೊಸ ಚಿತ್ರದ ಟೈಟಲ್ ಮತ್ತು ಸಣ್ಣ ಗ್ಲಿಂಪ್ಸ್ ಬಿಡುಗಡೆ ಮಾಡಿ ಅವರು ಭಾರತೀಯ ಚಿತ್ರರಂಗದ ಗಮನವನ್ನು ಸೆಳೆದಿದ್ದಾರೆ.
‘ಬಾಹುಬಲಿ ದಿ ಎಪಿಕ್’ ಬಿಡುಗಡೆ ಮೂಲಕ ಜಪಾನ್ ಪ್ರೇಕ್ಷಕರಿಗೆ ಈ ದಶಕದ ಅತಿ ದೊಡ್ಡ ದೃಶ್ಯ ವೈಭವವನ್ನು ಒದಗಿಸಲು ಚಿತ್ರತಂಡ ಭರ್ಜರಿ ತಯಾರಿಯಲ್ಲಿದೆ.

