ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎಂದೇ ಪರಿಗಣಿಸಲಾಗುವ ಸೂಪರ್ ಹಿಟ್ ಸಿನಿಮಾ ‘ಶೋಲೆ’ ತೆರೆಕಂಡು ಈಗ 50 ವರ್ಷಗಳು ಪೂರ್ಣಗೊಂಡಿವೆ. 1975ರ ಆಗಸ್ಟ್ 15ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಅಂದಿನ ದಿನಗಳಲ್ಲಿ ಭರ್ಜರಿ ಕಮಾಯಿ ಮಾಡಿದ್ದ ಈ ಕ್ಲಾಸಿಕ್ ಚಿತ್ರ, ಇದೀಗ ಹೊಸ ತಂತ್ರಜ್ಞಾನದ ಸ್ಪರ್ಶದೊಂದಿಗೆ ಮರು ಬಿಡುಗಡೆಗೆ ಸಜ್ಜಾಗಿದೆ.
ನಿರ್ದೇಶಕ ರಮೇಶ್ ಸಿಪ್ಪಿ ಅವರ ಸಾರಥ್ಯದಲ್ಲಿ ಮೂಡಿಬಂದಿದ್ದ ಈ ಆ್ಯಕ್ಷನ್ ಥ್ರಿಲ್ಲರ್ ಕಹಾನಿ, ಸಾರ್ವಕಾಲಿಕ ಎವರ್ಗ್ರೀನ್ ಎನಿಸಿದೆ. ಚಿತ್ರದಲ್ಲಿ ಧರ್ಮೇಂದ್ರ, ಅಮಿತಾಭ್ ಬಚ್ಚನ್, ಹೇಮಾ ಮಾಲಿನಿ, ಮತ್ತು ಖಳನಾಯಕನಾಗಿ ಅಮ್ಜದ್ ಖಾನ್ (ಗಬ್ಬರ್ ಸಿಂಗ್) ಅವರಂತಹ ದಿಗ್ಗಜರು ನಟಿಸಿದ್ದರು.
‘ಶೋಲೆ’ಯ 50 ವರ್ಷಗಳ ಸಂಭ್ರಮದ ಹಿನ್ನೆಲೆಯಲ್ಲಿ ಡಿಸೆಂಬರ್ 12ರಂದು ಸುಮಾರು 1500 ಚಿತ್ರಮಂದಿರಗಳಲ್ಲಿ ಈ ಚಿತ್ರವನ್ನು ಪುನಃ ಬಿಡುಗಡೆ ಮಾಡಲು ಸಿದ್ಧತೆ ಮಾಡಲಾಗಿದೆ. ಈ ಬಾರಿ, ಸಿನಿಮಾವನ್ನು 4K ರೆಸಲ್ಯೂಷನ್ನಲ್ಲಿ ಪ್ರದರ್ಶಿಸಲಾಗುತ್ತಿದ್ದು, ಪ್ರತಿ ಫ್ರೇಮ್ನ ಗುಣಮಟ್ಟವನ್ನು ಹೆಚ್ಚಿಸಲಾಗಿದೆ. ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿರುವ ಟ್ರೇಲರ್ ಇದಕ್ಕೆ ಸಾಕ್ಷಿಯಾಗಿದ್ದು, ಅಭಿಮಾನಿಗಳು ‘ಹೊಸ ಸಿನಿಮಾ ಬಿಡುಗಡೆಯಾಗುತ್ತಿದೆ’ ಎಂಬ ಫೀಲ್ ನೀಡುತ್ತಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಈ ಮರುಬಿಡುಗಡೆಯ ಇನ್ನೊಂದು ವಿಶೇಷವೆಂದರೆ ಇದರ ಕ್ಲೈಮ್ಯಾಕ್ಸ್. 1975ರಲ್ಲಿ ಬಿಡುಗಡೆಯಾದಾಗ ದೇಶದಲ್ಲಿ ತುರ್ತು ಪರಿಸ್ಥಿತಿ ಇದ್ದ ಕಾರಣ, ಸೆನ್ಸಾರ್ ಮಂಡಳಿ ಮೂಲ ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಕತ್ತರಿ ಹಾಕಿತ್ತು. ಆದರೆ, ಈ ಬಾರಿ ಪುನಃ ಬಿಡುಗಡೆ ಆಗುತ್ತಿರುವ ‘ಶೋಲೆ’ಯಲ್ಲಿ ಮೂಲ ಕ್ಲೈಮ್ಯಾಕ್ಸ್ ದೃಶ್ಯವೇ ಇರಲಿದೆ. 50 ವರ್ಷಗಳ ಹಳೆಯ ಸಿನಿಮಾಕ್ಕೆ ಹೊಸ ತಂತ್ರಜ್ಞಾನದ ಸ್ಪರ್ಶದೊಂದಿಗೆ ಪ್ರೇಕ್ಷಕರಿಗೆ ನೀಡಲಾಗುತ್ತಿದೆ.
ಇತ್ತೀಚೆಗೆ ವಯೋಸಹಜ ಕಾಯಿಲೆಯಿಂದ ನಿಧನರಾದ ನಟ ಧರ್ಮೇಂದ್ರ ಅವರಿಗೆ ಗೌರವ ಸಲ್ಲಿಸುವ ಸಲುವಾಗಿಯೂ ‘ಶೋಲೆ’ ಮರು ಬಿಡುಗಡೆ ಆಗುತ್ತಿದೆ. ಅವರು ಬದುಕಿದ್ದಿದ್ದರೆ, ಡಿಸೆಂಬರ್ 8ಕ್ಕೆ 90ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಅವರ ಸ್ಮರಣಾರ್ಥ ಈ ಐತಿಹಾಸಿಕ ಚಿತ್ರವನ್ನು ಡಿಸೆಂಬರ್ 12ರಂದು ಬಿಡುಗಡೆ ಮಾಡಲಾಗುತ್ತಿದೆ.

