Saturday, December 6, 2025

ಶಾರುಖ್ ಪುತ್ರನ ವಿರುದ್ಧ ದೂರು: ‘ದುರ್ನಡತೆ’ ವಿವಾದಕ್ಕೆ ಸ್ಪಷ್ಟನೆ ನೀಡಿದ ನಟ ಝೈದ್ ಖಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಬೆಂಗಳೂರಿನಲ್ಲಿ ಎಸಗಿದ ‘ದುರ್ವರ್ತನೆ’ಯ ವಿವಾದವು ಈಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಇತ್ತೀಚೆಗೆ ನಗರಕ್ಕೆ ಬಂದಿದ್ದಾಗ, ಸಾರ್ವಜನಿಕವಾಗಿ ಮಧ್ಯದ ಬೆರಳನ್ನು ತೋರಿಸಿ ವಿವಾದಕ್ಕೆ ಗುರಿಯಾಗಿದ್ದ ಆರ್ಯನ್ ವಿರುದ್ಧ ಇದೀಗ ದೂರು ದಾಖಲಾಗಿದೆ.

ವೈರಲ್ ವಿಡಿಯೋ ಆಧರಿಸಿ ಆರ್ಯನ್ ಖಾನ್ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿದೆ. ಹುಸೇನ್ ಎಂಬುವವರು ಡಿಜಿ, ಐಜಿಪಿ ಮತ್ತು ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದು, “ಆರ್ಯನ್ ಖಾನ್ ಅವರು ಅಸಭ್ಯವಾಗಿ ನಡೆದುಕೊಂಡಿದ್ದಾರೆ ಮತ್ತು ಮಹಿಳೆಯರಿಗೆ ಅಗೌರವ ತೋರಿದ್ದಾರೆ” ಎಂದು ಆರೋಪಿಸಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಚಾಮರಾಜಪೇಟೆಯಲ್ಲಿ ನಡೆದ ಇದೇ ರೀತಿಯ ಪ್ರಕರಣದಲ್ಲಿ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಂಡಂತೆ, ಆರ್ಯನ್ ವಿರುದ್ಧವೂ ಕೇಸ್ ದಾಖಲಿಸಿ ತನಿಖೆ ಮಾಡುವಂತೆ ವಕೀಲರು ಮನವಿ ಮಾಡಿದ್ದಾರೆ.

ಘಟನೆ ನಡೆದಾಗ ಆರ್ಯನ್ ಖಾನ್ ಜೊತೆಗಿದ್ದ ರಾಜಕಾರಣಿ ಜಮೀರ್ ಅಹ್ಮದ್ ಅವರ ಪುತ್ರ, ನಟ ಝೈದ್ ಖಾನ್ ಅವರು ಈ ವಿವಾದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಆರ್ಯನ್ ತಮ್ಮ ಬಾಲ್ಯದ ಗೆಳೆಯ ಮತ್ತು ನಟನೆಯನ್ನು ಒಟ್ಟಿಗೆ ಕಲಿತವರು ಎಂದು ಹೇಳಿಕೊಂಡಿರುವ ಝೈದ್, ಆರ್ಯನ್ ಬೆಂಗಳೂರಿಗೆ ಬಂದಿದ್ದಾಗ ಒಂದು ಉದ್ಘಾಟನಾ ಸಮಾರಂಭಕ್ಕೆ ಹೋಗಿದ್ದಾಗಿ ತಿಳಿಸಿದ್ದಾರೆ.

ಆದರೆ, ಸಮಾರಂಭದಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಜನ ಸೇರಿದ್ದರಿಂದ ಆರ್ಯನ್, “ಇಷ್ಟು ಜನರಿರುವಲ್ಲಿ ನನ್ನಿಂದ ಸಾಧ್ಯವಿಲ್ಲ” ಎಂದು ಹೇಳಿದ್ದ. ಆರ್ಯನ್‌ನ ಮ್ಯಾನೇಜರ್ ಜನರನ್ನ ಚದುರಿಸಲು ಹೋಗಿ ಎಷ್ಟೊತ್ತಾದರೂ ಹಿಂತಿರುಗಲಿಲ್ಲ. ಆಗ ಬಾಲ್ಕನಿಗೆ ಹೋಗಿ ನೋಡಿದಾಗ, ಆರ್ಯನ್ ಆ ಬೆರಳನ್ನು ಜನರಿಗೆ ತೋರಿಸದೆ, ತನ್ನ ಗೆಳೆಯನೂ ಆದ ಮ್ಯಾನೇಜರ್‌ಗೆ ತೋರಿಸಿದ್ದಾಗಿ ಝೈದ್ ಖಾನ್ ಸ್ಪಷ್ಟಪಡಿಸಿದ್ದಾರೆ.

ಆರ್ಯನ್ ಖಾನ್ ವಿವಾದಗಳ ಮೂಲಕವೇ ಸುದ್ದಿಯಾಗುತ್ತಿದ್ದು, ಈ ಹೊಸ ಪ್ರಕರಣವು ಮತ್ತೊಮ್ಮೆ ಅವರನ್ನು ಚರ್ಚೆಗೆ ತಂದಿದೆ.

error: Content is protected !!