ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟೆಸ್ಟ್ ಪಂದ್ಯವು ಭಾರೀ ಕುತೂಹಲಕ್ಕೆ ಕಾರಣವಾಗಿ ಡ್ರಾದಲ್ಲಿ ಕೊನೆಗೊಂಡಿದೆ. ನ್ಯೂಜಿಲೆಂಡ್ ತಂಡದ ಗೆಲುವು ಬಹುತೇಕ ಖಚಿತ ಎಂಬ ಹಂತದಲ್ಲಿ, ವೆಸ್ಟ್ ಇಂಡೀಸ್ ಬ್ಯಾಟರ್‌ಗಳು ನಡೆಸಿದ ದಿಟ್ಟ ಹೋರಾಟವು ಪಂದ್ಯದ ಫಲಿತಾಂಶವನ್ನೇ ಬದಲಾಯಿಸಿತು.
ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ರೋಸ್ಟನ್ ಚೇಸ್ ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 231 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ವಿಂಡೀಸ್ ಪಡೆ ಕೇವಲ 167 ರನ್ ಗಳಿಸಿ ಹಿನ್ನಡೆ ಅನುಭವಿಸಿತು.
64 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್‌ಗೆ ಯುವ ಆಟಗಾರ ರಚಿನ್ ರವೀಂದ್ರ (176) ಮತ್ತು ಅನುಭವಿ ಆರಂಭಿಕ ಟಾಮ್ ಲಾಥಮ್ (145) ಭರ್ಜರಿ ಶತಕಗಳ ಮೂಲಕ ಬಲ ನೀಡಿದರು. ಅಂತಿಮವಾಗಿ ನ್ಯೂಜಿಲೆಂಡ್ 466 ರನ್‌ಗಳಿಗೆ ಡಿಕ್ಲೇರ್ ಘೋಷಿಸಿ, ವೆಸ್ಟ್ ಇಂಡೀಸ್‌ಗೆ ಗೆಲ್ಲಲು 531 ರನ್‌ಗಳ ಕಠಿಣ ಗುರಿ ನೀಡಿತು.
ಈ ಬೃಹತ್ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಕೇವಲ 72 ರನ್‌ಗಳಿಗೆ ನಾಲ್ಕು ವಿಕೆಟ್‌ಗಳು ಪತನಗೊಂಡಿದ್ದವು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ಶಾಯ್ ಹೋಪ್ (140) ಭರ್ಜರಿ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಆದರೆ ಹೋಪ್ ಔಟಾದ ನಂತರವೂ 277 ರನ್‌ಗಳಿಗೆ 6 ವಿಕೆಟ್ ಬಿದ್ದಾಗ ವಿಂಡೀಸ್ ಸೋಲಿನಂಚಿನಲ್ಲಿತ್ತು.
ಸೋಲು ಖಚಿತ ಎನಿಸಿದ್ದಾಗ, ಏಳನೇ ವಿಕೆಟ್‌ಗೆ ಜೊತೆಯಾದ ಜಸ್ಟಿನ್ ಗ್ರೀವ್ಸ್ ಮತ್ತು ಕೆಮರ್ ರೋಚ್ ಇತಿಹಾಸ ಸೃಷ್ಟಿಸಿದರು. ಈ ಜೋಡಿ ಬರೋಬ್ಬರಿ 180 ರನ್‌ಗಳ ಅಜೇಯ ಜೊತೆಯಾಟ ನೀಡಿ, ಪಂದ್ಯವನ್ನು ಸಂಪೂರ್ಣವಾಗಿ ಡ್ರಾದತ್ತ ತಿರುಗಿಸಿತು.
ಜಸ್ಟಿನ್ ಗ್ರೀವ್ಸ್ ತಮ್ಮ ಅಸಾಧಾರಣ ಹೋರಾಟದಿಂದ ಅಜೇಯ 202 ರನ್ ಗಳಿಸಿದರೆ, ಅವರಿಗೆ ರೋಚ್ ಅಜೇಯ 58 ರನ್‌ಗಳ ಕೊಡುಗೆ ನೀಡಿ ಉತ್ತಮ ಬೆಂಬಲ ನೀಡಿದರು. ಐದನೇ ದಿನದಾಟದ ಸಂಪೂರ್ಣ ಅವಧಿಯನ್ನು ಬ್ಯಾಟಿಂಗ್ ಮಾಡುವ ಮೂಲಕ ವೆಸ್ಟ್ ಇಂಡೀಸ್ ತಂಡವು ಸೋಲಿನಿಂದ ಪಾರಾಗಿ ಪಂದ್ಯವನ್ನು ಡ್ರಾದಲ್ಲಿ ಕೊನೆಗೊಳಿಸುವಲ್ಲಿ ಯಶಸ್ವಿಯಾಯಿತು.

