ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಯರ್ ಎಂಡ್ ಆಗುತ್ತಿದ್ದಂತೆ ತಿರುಪತಿ ತಿಮ್ಮಪ್ಪನ ದರುಶನಕ್ಕಾಗಿ ಭಕ್ತರ ಹರಿವು ಹೆಚ್ಚಾಗಿದೆ. ವೈಕುಂಠ ಏಕಾದಶಿ, ಕ್ರಿಸ್ಮಸ್ ರಜೆ ಹಾಗೂ ಹೊಸ ವರ್ಷದ ರಜಾವಕಾಶ ಒಂದೇ ಸಮಯದಲ್ಲಿ ಬಂದಿರುವುದರಿಂದ ಕರ್ನಾಟಕದಿಂದ ತಿರುಪತಿಗೆ ತೆರಳುವ ಯಾತ್ರಾರ್ಥಿಗಳ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿದೆ. ಇದರ ಪರಿಣಾಮವಾಗಿ ಸರ್ಕಾರಿ ಸಾರಿಗೆಯಾದ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಬೇಡಿಕೆ ಕಂಡುಬಂದಿದೆ.
ತಿರುಪತಿ ಬಾಲಾಜಿಯನ್ನು ನೋಡಲು ಲಕ್ಷಾಂತರ ಭಕ್ತರು ರಾಜ್ಯದ ನಾನಾ ಭಾಗಗಳಿಂದ ಪ್ರತಿದಿನಲೂ ಪ್ರಯಾಣಿಸುತ್ತಿದ್ದಾರೆ. ಪ್ರಸ್ತುತ ಕರ್ನಾಟಕದ ನಾಲ್ಕು ಸಾರಿಗೆ ಸಂಸ್ಥೆಗಳು ಸೇರಿ ತಿರುಪತಿಗೆ ಸುಮಾರು 280 ಬಸ್‌ಗಳನ್ನು ನಡೆಸುತ್ತಿದ್ದು, ಹಬ್ಬದ ದಿನಗಳಲ್ಲಿ ಈ ಸಂಖ್ಯೆ ಸಾಲದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇತ್ತ ಖಾಸಗಿ ಬಸ್‌ಗಳು ಅಧಿಕ ದರ ವಿಧಿಸುತ್ತಿರುವುದರಿಂದ ಭಕ್ತರು ಸರ್ಕಾರಿ ಬಸ್‌ಗಳತ್ತ ಹೆಚ್ಚು ಒಲವು ತೋರುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಹೆಚ್ಚುವರಿ ಬಸ್‌ಗಳನ್ನು ಕಾರ್ಯಾಚರಣೆಗೆ ಇಳಿಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಹಬ್ಬ ಹಾಗೂ ರಜೆಗಳ ಸಮಯದಲ್ಲಿ ತಿರುಪತಿಯಲ್ಲಿ ದರ್ಶನಕ್ಕೆ ಮೂರುರಿಂದ ನಾಲ್ಕು ದಿನಗಳವರೆಗೂ ಕಾಯಬೇಕಾದ ಪರಿಸ್ಥಿತಿ ಇರುವುದರಿಂದ, ಕೆಎಸ್‌ಆರ್‌ಟಿಸಿ ಪ್ರಯಾಣಿಕರಿಗೆ ಶೀಘ್ರ ದರ್ಶನದ ಟಿಕೆಟ್ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆ ಕೂಡ ಕೇಳಿಬಂದಿದೆ.

