ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದೇಶದಲ್ಲಿ ವಿದ್ಯಾಭ್ಯಾಸದ ಕನಸು ಕಟ್ಟಿಕೊಂಡಿದ್ದ ತೆಲಂಗಾಣ ಮೂಲದ ಯುವತಿಯ ಜೀವನ ದುರಂತ ಅಂತ್ಯ ಕಂಡಿದೆ. ಅಮೆರಿಕದ ನ್ಯೂಯಾರ್ಕ್ ರಾಜ್ಯದ ಆಲ್ಬನಿಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಭಾರತೀಯ ವಿದ್ಯಾರ್ಥಿನಿ ಪ್ರಾಣ ಕಳೆದುಕೊಂಡಿದ್ದಾಳೆ.
ಮೃತ ವಿದ್ಯಾರ್ಥಿನಿಯನ್ನು ತೆಲಂಗಾಣದ ಜನಗಾಂವ್ ಜಿಲ್ಲೆಯ ಸಹಜಾ ರೆಡ್ಡಿ ಉಡುಮಲಾ (24) ಎಂದು ಗುರುತಿಸಲಾಗಿದೆ.
ಸಹಜಾ ವಾಸವಾಗಿದ್ದ ಮನೆಯ ಪಕ್ಕದ ಕಟ್ಟಡದಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಅದು ಆಕೆಯ ಮನೆಗೂ ವ್ಯಾಪಿಸಿದೆ. ಅಗ್ನಿ ಅವಘಡ ಸಂಭವಿಸಿದ ವೇಳೆಗೆ ಸಹಜಾ ನಿದ್ರೆಯಲ್ಲಿದ್ದ ಕಾರಣ ಹೊರಬರುವ ಅವಕಾಶ ಸಿಗದೇ, ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದಲ್ಲಿನ ಭಾರತೀಯ ಕಾನ್ಸುಲೇಟ್ ಜನರಲ್, ಸಹಜಾ ಅವರ ಅಕಾಲಿಕ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಸಂತ್ರಸ್ತೆಯ ಕುಟುಂಬದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮೃತದೇಹವನ್ನು ಭಾರತಕ್ಕೆ ತರಲು ಅಗತ್ಯ ಎಲ್ಲಾ ನೆರವು ಒದಗಿಸಲಾಗುವುದು ಎಂದು ಕಾನ್ಸುಲೇಟ್ ಭರವಸೆ ನೀಡಿದೆ.

