ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ಚಲನಚಿತ್ರರಂಗವನ್ನು ವರ್ಷಗಳ ಕಾಲ ಕಾಡಿದ್ದ ನಟಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಕೊನೆಗೂ ನ್ಯಾಯಾಲಯ ಅಂತಿಮ ತೀರ್ಪು ಪ್ರಕಟಿಸಿದೆ. ಎರ್ನಾಕುಲಂ ಪ್ರಧಾನ ಸೆಷನ್ಸ್ ನ್ಯಾಯಾಲಯ, ಪ್ರಕರಣದ 8ನೇ ಆರೋಪಿ ಖ್ಯಾತ ನಟ ದಿಲೀಪ್ ಅವರನ್ನು ಖುಲಾಸೆಗೊಳಿಸಿದ್ದು, ಮೊದಲ ಆರೋಪಿ ಪಲ್ಸರ್ ಸುನಿ ಸೇರಿದಂತೆ ಆರು ಆರೋಪಿಗಳು ಅಪರಾಧಿಗಳು ಎಂದು ತೀರ್ಮಾನಿಸಿದೆ. ಆರು ವರ್ಷಕ್ಕೂ ಹೆಚ್ಚು ಕಾಲ ನಡೆದ ವಿಚಾರಣೆಯ ನಂತರ ಈ ತೀರ್ಪು ಹೊರಬಂದಿದೆ.
2017ರ ಫೆಬ್ರವರಿಯಲ್ಲಿ ಕೊಚ್ಚಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ನಟಿಯ ಮೇಲೆ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ನಡೆದಿತ್ತು. ಈ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿದ್ದ ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಅಪಹರಣ ಮತ್ತು ಸಂಚು ಆರೋಪಗಳು ಸಾಬೀತಾದವು ಎಂದು ನ್ಯಾಯಾಲಯ ತಿಳಿಸಿದೆ.
ಆದರೆ, ಈ ಘಟನೆಯ ಸೂತ್ರಧಾರನಾಗಿದ್ದಾನೆ ಎಂಬ ಪ್ರಾಸಿಕ್ಯೂಷನ್ ಆರೋಪವನ್ನು ದಿಲೀಪ್ ವಿರುದ್ಧ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಪ್ರಕರಣದಲ್ಲಿ ದಿಲೀಪ್ ತನ್ನನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ ಎಂದು ವಾದಿಸಿದ್ದರು. ಸಾಕ್ಷ್ಯಾಧಾರಗಳ ಕೊರತೆಯನ್ನು ಪರಿಗಣಿಸಿದ ನ್ಯಾಯಾಲಯ ದಿಲೀಪ್ ಅವರನ್ನು ಖುಲಾಸೆಗೊಳಿಸಿದೆ.

