ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿನೇದಿನೇ ಹೆಚ್ಚುತ್ತಿರುವ ವಾಹನ ದಟ್ಟಣೆಯ ನಡುವೆ ಬೆಂಗಳೂರಿಗರಿಗೆ ಮೆಟ್ರೋ ಸಂಚಾರವೇ ಆಶ್ರಯವಾಗುತ್ತಿದೆ. ಟ್ರಾಫಿಕ್ ಕಿರಿಕಿರಿ ಬೇಡವೇ ಬೇಡ ಎಂದು ದಿನನಿತ್ಯ ಸಾವಿರಾರು ಜನ ನಂಬಿಕೊಂಡಿರುವ ನಮ್ಮ ಮೆಟ್ರೋ ಇದೀಗ ಇನ್ನೊಂದು ಮಹತ್ವದ ಹೆಜ್ಜೆ ಇಡಲು ಸಜ್ಜಾಗಿದೆ.
ಪ್ರಯಾಣಿಕರ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶದಿಂದ ಬಿಎಂಆರ್‌ಸಿಎಲ್ ಒಟ್ಟು 96 ಹೊಸ ಮೆಟ್ರೋ ರೈಲುಗಳನ್ನು ಸೇರ್ಪಡೆಗೊಳಿಸುವ ಪ್ರಕ್ರಿಯೆ ಆರಂಭಿಸಿದೆ. ಹೊಸ ರೈಲುಗಳು ಹಂತ ಹಂತವಾಗಿ ಸೇರ್ಪಡೆಯಾದ ಬಳಿಕ, ಪ್ರಮುಖ ಮಾರ್ಗಗಳಲ್ಲಿ 4 ನಿಮಿಷಕ್ಕೊಮ್ಮೆ ಮೆಟ್ರೋ ಸಂಚಾರ ಆರಂಭಿಸುವ ಗುರಿ ಹೊಂದಲಾಗಿದೆ.
ಸದ್ಯ ಹಸಿರು ಮಾರ್ಗ, ನೇರಳೆ ಮಾರ್ಗ ಮತ್ತು ಯೆಲ್ಲೋ ಮಾರ್ಗ ಸೇರಿ ಒಟ್ಟು 64 ರೈಲುಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಗ್ರೀನ್ ಮತ್ತು ಪರ್ಪಲ್ ಲೈನ್‌ಗೆ 58 ರೈಲುಗಳಿದ್ದರೆ, ಯೆಲ್ಲೋ ಲೈನ್‌ನಲ್ಲಿ 6 ರೈಲುಗಳಿವೆ. ಮುಂದಿನ ದಿನಗಳಲ್ಲಿ ಗ್ರೀನ್ ಹಾಗೂ ಪರ್ಪಲ್ ಲೈನ್‌ಗಳಿಗೆ 21 ಹೊಸ ರೈಲುಗಳು, ಯೆಲ್ಲೋ ಲೈನ್‌ಗೆ 9 ರೈಲುಗಳು ಸೇರ್ಪಡೆಯಾಗಲಿದ್ದು, ಹೆಚ್ಚುವರಿಯಾಗಿ 6 ರೈಲುಗಳಿಗೆ ಆರ್ಡರ್ ನೀಡಲಾಗಿದೆ.
ಎಲ್ಲ ಮಾರ್ಗಗಳು ಕಾರ್ಯಾರಂಭಿಸಿದ ಬಳಿಕ, ನಮ್ಮ ಮೆಟ್ರೋದ ರೈಲುಗಳ ಸಂಖ್ಯೆ 160ಕ್ಕೆ ಏರಿಕೆಯಾಗಲಿದೆ.

