ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯನ್ ರೇಸಿಂಗ್ ಫೆಸ್ಟಿವಲ್‌ನ ಭಾಗವಾಗಿರುವ FIA ಮಾನ್ಯತೆ ಪಡೆದ ಫಾರ್ಮುಲಾ 4 ಇಂಡಿಯನ್ ಚಾಂಪಿಯನ್‌ಶಿಪ್ ಫಿನಾಲೆ (F4IC) ಇದೇ ಡಿಸೆಂಬರ್ 13–14 ರಂದು ಮದ್ರಾಸ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ನಡೆಯಲಿದೆ.
ಹದಿನೈದು ವರ್ಷದ ಕೀನ್ಯಾದ ರೇಸರ್ ಶೇನ್ ಚಂದಾರಿಯಾ (ಚೆನ್ನೈ ಟರ್ಬೊ ರೈಡರ್ಸ್) 158 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಚೆನ್ನೈಗೆ ಆಗಮಿಸುತ್ತಿದ್ದಾರೆ. ಅವರು ಈ ವರ್ಷ ಗ್ರಿಡ್‌ನಲ್ಲಿ ಅತ್ಯಂತ ಸ್ಥಿರವಾದ ಚಾಲಕರಾಗಿದ್ದಾರೆ.
ಫ್ರೆಂಚ್ ಚಾಲಕ ಸಾಚೆಲ್ ರೊಟ್ಗೆ (ಕಿಚ್ಚಾ ಕಿಂಗ್ಸ್ ಬೆಂಗಳೂರು) 134 ಅಂಕಗಳೊಂದಿಗೆ ಮುನ್ನಡೆಯಲಿದ್ದಾರೆ. ಹಿಂದೆ ನಡೆದ 2 ನೇ ಸುತ್ತಿನಲ್ಲಿ ಎರಡು ಗೆಲುವುಗಳನ್ನು ತನ್ನದಾಗಿಸಿಕೊಂಡ ಸಾಚೆಲ್ ಕೊಯಮತ್ತೂರಿನಲ್ಲಿ ಕೂಡ ಮತ್ತೊಂದು ಜಯವನ್ನು ಸಾಧಿಸಿ ಈಗ ಫಿನಾಲೆಗೆ ಲಗ್ಗೆಯಿಟ್ಟಿದ್ದಾರೆ.
ಭಾರತದ ಯುವ ಪ್ರತಿಭೆ ಇಶಾನ್ ಮಾದೇಶ್ (ಕೊಲ್ಕತಾ ರಾಯಲ್ ಟೈಗರ್ಸ್) 127 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಈ ಸೀಸನ್‌ನ ಮೊದಲ ಭಾಗದಲ್ಲೇ ಚೆನ್ನೈನಲ್ಲಿ ಗೆಲುವು ಗಳಿಸಿರುವ ಅವರು ಶೇನ್ ಮತ್ತು ಸಾಚೆಲ್ ಇಬ್ಬರಿಗೂ ಕಠಿಣ ಪೈಪೋಟಿ ನೀಡಲಿದ್ದಾರೆ.
ಸಾಯಿ ಶಿವ ಶಂಕರನ್ (ಸ್ಪೀಡ್ ಡೆಮನ್ಸ್ ದೆಹಲಿ), ಘಾಜಿ ಮೊಟ್ಲೆಕರ್ (ಕೋಲ್ಕತ್ತಾ ರಾಯಲ್ ಟೈಗರ್ಸ್), ಮತ್ತು ಲುವಿವೆ ಸಂಬುಡ್ಲಾ (ಗೋವಾ ಏಸಸ್ ಜೆಎ ರೇಸಿಂಗ್) ಸೇರಿದಂತೆ ಅನೇಕ ಚಾಲಕರು ನಿರಂತರವಾಗಿ ಕಠಿಣ ಹೋರಾಟ ನೀಡುತ್ತಾ ನಿಯಮಿತವಾಗಿ ಪೊಡಿಯಂಗಾಗಿ ಪೈಪೋಟಿ ನಡೆಸಿದ್ದಾರೆ.
ಮದ್ರಾಸ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್ ವೇಗದ ತಿರುವುಗಳು ಮತ್ತು ಸವಾಲಿನ ಬ್ರೇಕಿಂಗ್ ಜೋನ್‌ಗಳಿಗಾಗಿ ಪ್ರಸಿದ್ಧವಾಗಿದೆ. ಇಂಡಿಯನ್ ರೇಸಿಂಗ್ ಫೆಸಿವಲ್ ಅಂತಿಮ ಘಟಕ್ಕೆ ತಲುಪಿದ್ದು, ಚಾಂಪಿಯನ್ ಪಟ್ಟ್ಟಕ್ಕಾಗಿ ಸ್ಪರ್ಧಿಗಳು ಪರದಾಡಲಿದ್ದಾರೆ.

