Wednesday, December 10, 2025

ಆ್ಯಶಸ್‌ನಲ್ಲಿ ಭರ್ಜರಿ ಆರಂಭ ಕಂಡ ಆಸೀಸ್‌ಗೆ ಆಘಾತ: ಹೇಝಲ್‌ವುಡ್ ಸರಣಿಯಿಂದ ಔಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆ್ಯಶಸ್ ಸರಣಿಯಲ್ಲಿ ಭರ್ಜರಿ ಆರಂಭ ಕಂಡಿರುವ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಕಂಟಕವೊಂದು ಎದುರಾಗಿದೆ. ವೇಗದ ಬೌಲರ್ ಜೋಶ್ ಹೇಝಲ್‌ವುಡ್ ಗಾಯದ ಕಾರಣ ಉಳಿದ ಆ್ಯಶಸ್‌ ಸರಣಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ.

ಸ್ನಾಯು ಸೆಳೆತ ಹಾಗೂ ಅಕಿಲೀಸ್ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿರುವ ಹೇಝಲ್‌ವುಡ್ ಇನ್ನೂ ಪೂರ್ಣ ಫಿಟ್ ಆಗಿಲ್ಲ. ಚೇತರಿಕೆಗೆ ಸಮಯ ಬೇಕಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ವೈದ್ಯರ ಸಲಹೆ ಮೇರೆಗೆ ಅವರು ಮುಂದಿನ ಪಂದ್ಯಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಲಭ್ಯರಾಗದ ಹೇಝಲ್‌ವುಡ್ ಮೂರನೇ ಟೆಸ್ಟ್‌ಗೆ ತಂಡಕ್ಕೆ ಮರಳುವ ವಿಶ್ವಾಸದಲ್ಲಿದ್ದರು. ಆದರೆ ಇತ್ತೀಚೆಗೆ ಗಾಯ ಉಲ್ಬಣಗೊಂಡಿದ್ದು, ಉಳಿದ ಮೂರು ಪಂದ್ಯಗಳಿಗೂ ಅವರು ಅಲಭ್ಯರಾಗಲಿದ್ದಾರೆ. ಇದರಿಂದಾಗಿ ಆಸ್ಟ್ರೇಲಿಯಾ ವೇಗದ ಬೌಲಿಂಗ್ ವಿಭಾಗಕ್ಕೆ ಸ್ವಲ್ಪ ಹಿನ್ನಡೆಯಾಗಿದೆ.

ಇದಕ್ಕೆ ವಿರುದ್ಧವಾಗಿ ಆಸ್ಟ್ರೇಲಿಯಾ ತಂಡಕ್ಕೆ ನಿರಾಳ ಸುದ್ದಿ ಎಂದರೆ ನಾಯಕ ಪ್ಯಾಟ್ ಕಮಿನ್ಸ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಬೆನ್ನು ನೋವಿನ ಕಾರಣ ಮೊದಲ ಎರಡು ಟೆಸ್ಟ್ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಕಮಿನ್ಸ್ ಮೂರನೇ ಟೆಸ್ಟ್‌ನಲ್ಲಿ ಮತ್ತೆ ನಾಯಕತ್ವ ವಹಿಸಲಿದ್ದಾರೆ. ಅಡಿಲೇಡ್‌ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಉಪನಾಯಕನಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

error: Content is protected !!