ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದ ಒಳಚಿತ್ರಣವನ್ನು ಬಿಚ್ಚಿಟ್ಟಂತಹ ಮಾತುಗಳನ್ನು ನಟ–ನಿರ್ದೇಶಕ ದುನಿಯಾ ವಿಜಯ್ ಇತ್ತೀಚೆಗೆ ಬಹಿರಂಗವಾಗಿ ಹೇಳಿದ್ದಾರೆ. ‘ಲ್ಯಾಂಡ್‌ಲಾರ್ಡ್’ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲಿ ಮಾತನಾಡಿದ ಅವರು, ಚಿತ್ರರಂಗದಲ್ಲಿ ತಾವು ಎದುರಿಸಿದ ಆರಂಭದ ದಿನಗಳ ಸಂಕಷ್ಟ, ಅವಮಾನ ಮತ್ತು ಮಾನಸಿಕ ಹೋರಾಟಗಳ ಬಗ್ಗೆ ಮನದಾಳದ ನೋವನ್ನು ವ್ಯಕ್ತಪಡಿಸಿದರು.
ನಟನೆಯ ಪಯಣವನ್ನು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಆರಂಭಿಸಿದ ದುನಿಯಾ ವಿಜಯ್, ಇಂದು ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಆದರೆ ಈ ಏಳಿಗೆ ಸುಲಭವಾಗಿರಲಿಲ್ಲ ಎನ್ನುವ ಅವರು, “ಒಬ್ಬನು ಬೆಳೆಯುತ್ತಿದ್ದರೆ, ಅದನ್ನು ಸಹಿಸುವ ಮನಸ್ಥಿತಿ ಎಲ್ಲರಲ್ಲೂ ಇರುವುದಿಲ್ಲ. ಹೊಗಳುವುದಕ್ಕಿಂತ ದ್ವೇಷ ಮತ್ತು ಅಸೂಯೆಯೇ ಹೆಚ್ಚಾಗಿ ಕಾಣಿಸುತ್ತದೆ. ಇದು ಮಾನವ ಸಹಜ ಗುಣ. ಆದರೆ ಅಂತವರಿಗೆ ಸೋಲು ಕಟ್ಟಿಟ್ಟ ಬುತ್ತಿ” ಎಂದು ಕಟುವಾಗಿ ಹೇಳಿದರು.
“ನಮ್ಮನ್ನು ತಡೆಯಲು ಪ್ರಯತ್ನಿಸುವವರನ್ನು ಸೋಲಿಸದೇ ಬಿಡುವುದಿಲ್ಲ” ಎನ್ನುವ ದುನಿಯಾ ವಿಜಯ್ ಅವರ ಹೇಳಿಕೆ ವೇದಿಕೆಯಲ್ಲಿದ್ದವರ ಗಮನ ಸೆಳೆದಿದೆ. ಅವರ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಹ ಚರ್ಚೆಗೆ ಗ್ರಾಸವಾಗಿದೆ.
ಈ ಸಂದರ್ಭದಲ್ಲೇ ನಟ ರಾಜ್ ಬಿ. ಶೆಟ್ಟಿ ಅವರ ಹೋರಾಟದ ಬದುಕನ್ನೂ ಉಲ್ಲೇಖಿಸಿದ ದುನಿಯಾ ವಿಜಯ್, “ರಾಜ್ ಬಿ. ಶೆಟ್ಟಿ ಕೂಡಾ ಆರಂಭದಲ್ಲಿ ಅವಮಾನಗಳನ್ನು ಎದುರಿಸಿ ಇಂದು ತಮ್ಮದೇ ಸ್ಥಾನ ನಿರ್ಮಿಸಿಕೊಂಡಿದ್ದಾರೆ. ಇವತ್ತು ‘ಲ್ಯಾಂಡ್‌ಲಾರ್ಡ್’ ಸಿನಿಮಾದ ರೂಲರ್ ಆಗಿ ನಿಂತಿದ್ದಾರೆ” ಎಂದು ಶ್ಲಾಘಿಸಿದರು.

