Wednesday, December 10, 2025

ಮದ್ಯಪಾನದಿಂದ ಲಿವಿರ್ ಸಿರೋಸಿಸ್,ಜಾಂಡೀಸ್ ಹೆಚ್ಚು: ಅಧಿವೇಶನದಲ್ಲಿ ಧ್ವನಿಯೆತ್ತಿದ ಎಂಎಲ್ಸಿ ರವಿಕುಮಾರ್, ಕೆ.ಎಸ್.ನವೀನ್

ಹೊಸ ದಿಗಂತ ವರದಿ,ಚಿತ್ರದುರ್ಗ :

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ವಿಧಾನ ಪರಿಷತ್ ಕಲಾಪದಲ್ಲಿ ನಿಯಮ ೩೩೦ ರಲ್ಲಿ ಸೋಮವಾರ ವಿಷಯ ಪ್ರಸ್ತಾಪಿಸಿ ಚರ್ಚೆಯಾಯಿತು. ಇದರಲ್ಲಿ ಎಂ.ಎಲ್.ಸಿ ರವಿಕುಮಾರ್, ಕೆ.ಎಸ್.ನವೀನ್‌ರವರು ಮದ್ಯಪಾನದಿಂದ ಲಿವಿರ್ ಸಿರೋಸಿಸ್ ಹಾಗೂ ಜಾಂಡೀಸ್ ಬಗ್ಗೆ ಮಾತನಾಡಿದರು.

ವಿಧಾನ ಪರಿಷತ್ ಮುಖ್ಯ ಸಚೇಯಕ ಎನ್.ರವಿಕುಮಾರ್ ಮಾತನಾಡಿ, ರಾಜ್ಯದಲ್ಲಿ ಮದ್ಯಪಾನ ಸೇವನೆ ಮಾಡುವ ಶೇ.೨.೭೪ ರಷ್ಟು ಜನರು ಲಿವರ್ ಸಿರೋಸಿಸ್ ಹಾಗೂ ಜಾಂಡಿಸ್‌ನಿಂದ ಬಳಲುತ್ತಿದ್ದಾರೆ. ಸರ್ಕಾರ ೨೦೨೫-೨೬ರಲ್ಲಿ ರೂ.೪೩,೦೦೦ ಕೋಟಿ ಅಬಕಾರಿ ಆದಾಯ ಗುರಿ ನಿಗದಿ ಮಾಡಿದೆ. ನವೆಂಬರ್‌ವರೆಗೆ ರೂ.೨೬,೬೧೫ ಕೋಟಿ ಅಬಕಾರಿ ಆದಾಯ ಸಂಗ್ರಹವಾಗಿದೆ ಎಂದರು.

ಪ್ರತಿ ವರ್ಷ ವಿಶ್ವದಲ್ಲಿ ೧೫ ಲಕ್ಷ ಜನ ಲಿವರ್ ಸಿರೋಸಿಸ್ ಮೃತಪಟ್ಟರೆ, ಇದರಲ್ಲಿ ೧೦ ಲಕ್ಷ ಜನರು ಭಾರತದವರೇ ಆಗಿರುವುದು ದುರ್ದೈವದ ಸಂಗತಿಯಾಗಿದೆ. ಸರ್ಕಾರ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕದ ಅಡಿ ಮಾತ್ರ ಲಿವರ್ ಸಿರೋಸಿಸ್‌ಗೆ ಚಿಕಿತ್ಸೆ ನೀಡದೆ, ಮದ್ಯಪಾನದಿಂದ ಉಂಟಾದ ರೋಗಗಳಿಗೆ ಪ್ರತ್ಯೇಕವಾಗಿ ಅಬಕಾರಿ ಆದಾಯ ಶೇ.೨೦ ರಷ್ಟನ್ನು ಈ ಖಾಯಿಲೆಗಳ ಚಿಕಿತ್ಸೆಗೆ ಮೀಸಲು ಇರಿಸಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಮದ್ಯಪಾನ ಸಾಮಾಜಿಕ ಪಿಡುಗಾಗಿ ಬದಲಾಗಿದೆ. ದೇಶದ ಜನಸಂಖ್ಯೆಯಲ್ಲಿ ೯ನೇ ಸ್ಥಾನದಲ್ಲಿರುವ ರಾಜ್ಯ, ಹಾರ್ಡ್ ಲಿಕ್ಕರ್ ಸೇವನೆಯಲ್ಲಿ ದೇಶಕ್ಕೆ ಮೊದಲನೇ ಸ್ಥಾನದಲ್ಲಿದೆ. ರಾಜ್ಯದಲಿ ೬.೮೮ ಕೋಟಿ ಕೇಸ್ ಹಾರ್ಡ್ ಲಿಕ್ಕರ್ ಬಿಕರಿಯಾಗುತ್ತಿದೆ. ಹಳ್ಳಿಗಳಲ್ಲಿ ಅಂಗಡಿಗಳಲ್ಲಿ ಮದ್ಯ ದೊರೆಯತ್ತಿದೆ ಎಂದು ಹೇಳಿದರು.

ಸರ್ಕಾರ ಬಾರ್ ಲೈಸೆನ್ಸ್ ಕಡಿವಾಣ ಹಾಕಬೇಕು. ಅಕ್ರಮವಾಗಿ ಮದ್ಯ ಮಾರಾಟ ಮಾಡಿದವರ ಲೈಸೆನ್ಸ್ ರದ್ದು ಮಾಡಬೇಕು. ಮದ್ಯಪಾನ ಚಟದಿಂದ ೩೦ ರಿಂದ ೪೦ ವಯಸ್ಸಿನ ಗಂಡು ಮಕ್ಕಳಲ್ಲಿ ಲಿವರ್ ಸಿರೋಸಿಸ್ ಖಾಯಿಲೆ ಹೆಚ್ಚಾಗಿ ಕಂಡುಬರುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಮದ್ಯವರ್ಜನ ಕೇಂದ್ರದಲ್ಲಿ ೧೨೦೦ ಜನ ಮದ್ಯವ್ಯಸನಿಗಳಲ್ಲಿ ೬೦೦ ಜನರಿಗೆ ಲಿವರ್ ಸಿರೋಸಿಸ್ ಖಾಯಿಲೆ ಕಂಡುಬಂದಿದೆ. ಮದ್ಯ ವಯಸ್ಕರ ಚಿಕ್ಕ ಪುಟ್ಟ ಮಕ್ಕಳನ್ನು ಅನಾಥರನ್ನಾಗಿಸಿವೆ ಎಂದರು.

error: Content is protected !!