Wednesday, December 10, 2025

23 ಕಂಬಳೋತ್ಸವಕ್ಕೆ ತಲಾ ರೂ.5 ಲಕ್ಷ ಅನುದಾನ: ಸಚಿವ ಎಚ್‌.ಕೆ. ಪಾಟೀಲ್‌

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಡೆಯುವ 23 ಕಂಬಳಗಳಿಗೆ ವರ್ಷಕ್ಕೊಮ್ಮೆ ತಲಾ 5 ಲಕ್ಷ ರೂ. ಪ್ರೋತ್ಸಾಹಧನ ನೀಡುವುದಾಗಿ ಪ್ರವಾಸೋಧ್ಯಮ ಸಚಿವ ಎಚ್‌.ಕೆ. ಪಾಟೀಲ್‌ ತಿಳಿಸಿದ್ದಾರೆ.

ಈಗಾಗಲೇ 10 ಕಂಬಳಗಳಿಗೆ ಅನುದಾನ ನೀಡಲಾಗಿದ್ದು, ಇತರ ಕಂಬಗಳಿಗೂ ಶೀಘ್ರ ನೀಡಲಾಗುವುದು ಎಂದು ಭರವಸೆ ನೀಡಿದರು.

ಶೂನ್ಯ ವೇಳೆಯಲ್ಲಿ ಪುತ್ತೂರು ಶಾಸಕ ಅಶೋಕ್‌ ರೈ ವಿಷಯ ಪ್ರಸ್ತಾಪಿಸಿದ್ದು, ಸಚಿವರು ಈ ರೀತಿಯಾಗಿ ಪ್ರತಿಕ್ರಿಯಿಸಿದರು.

ಕಂಬಳ ಬೆಳೆಸುವ ನಿಟ್ಟಿನಲ್ಲಿ ಸರಕಾರದ ನೆರವು ಅಗತ್ಯ. ಹಿಂದೆ ಕಂಬಳಕ್ಕೆ ತಲಾ 5 ಲಕ್ಷ ರೂ. ಅನುದಾನ ನೀಡಲಾಗುತ್ತಿತ್ತು. ಬಳಿಕ ನಿಲ್ಲಿಸಲಾಗಿತ್ತು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಒಟ್ಟು 23 ಕಂಬಳಗಳು ನಡೆಯುತ್ತಿವೆ. ಸರಕಾರ ಈ ವರ್ಷ 10 ಕಂಬಳಗಳಿಗೆ ತಲಾ 5 ಲಕ್ಷ ರೂ.ಗಳಂತೆ ಪ್ರೋತ್ಸಾಹಧನ ನೀಡಿದೆ. ಉಳಿದ ಕಂಬಳಗಳಿಗೂ ನೀಡುವಂತೆ ಶಾಸಕ ಅಶೋಕ್‌ ರೈ ಆಗ್ರಹಿಸಿದರು. ಶಾಸಕರ ಪ್ರಸ್ತಾಪಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ಬೆಂಬಲ ಸೂಚಿಸಿದರು.

ಸಚಿವ ಎಚ್‌.ಕೆ. ಪಾಟೀಲ್‌ ಮಾತನಾಡಿ, ಕಂಬಳ ಪ್ರೋತ್ಸಾಹಧನದ ಬಗ್ಗೆ ಮಾತನಾಡಲು ಶಾಸಕ ಅಶೋಕ್‌ ರೈ 10ಕ್ಕೂ ಹೆಚ್ಚು ಬಾರಿ ನನ್ನ ಬಳಿ ಬಂದಿದ್ದಾರೆ. ಈ ಬಾರಿ 10 ಕಂಬಳಗಳಿಗೆ ತಲಾ 5 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗಿದೆ. ಉಳಿದ ಅರ್ಜಿಗಳನ್ನು ಹಣಕಾಸು ಇಲಾಖೆಗೆ ಮಂಜೂರಾತಿಗೆ ಕಳುಹಿಸಲಾಗಿದೆ. ಮುಂದಿನ ವರ್ಷದಿಂದ 23 ಕಂಬಳಗಳಿಗೂ ಏಕಕಾಲದಲ್ಲಿ ತಲಾ 5 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು ಎಂದರು.

error: Content is protected !!