ಚುಟುಕು ಕ್ರಿಕೆಟ್‌ನಲ್ಲಿ ಭಾರತಕ್ಕೆ ಭವಿಷ್ಯದ ನಂಬಿಕೆಯೆನಿಸಿರುವ ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದು ತಮ್ಮ ಹೆಸರನ್ನು ಇತಿಹಾಸ ಪುಟಗಳಲ್ಲಿ ದಾಖಲಿಸಿದ್ದಾರೆ. ನಿರಂತರ ಸ್ಥಿರ ಪ್ರದರ್ಶನದ ಮೂಲಕ ತಂಡದ ಮಧ್ಯಮ ಕ್ರಮಾಂಕಕ್ಕೆ ಆಸರೆಯಾಗಿ ನಿಂತಿರುವ ತಿಲಕ್, ಭಾರತದ ಯಾವುದೇ ಯುವ ಆಟಗಾರ ಸಾಧಿಸದ ಮಹತ್ವದ ಮೈಲಿಗಲ್ಲು ದಾಟಿದ್ದಾರೆ.
ಕಟಕ್‌ನ ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ನಾಲ್ಕು ರನ್ ಗಳಿಸುವ ಮೂಲಕ ತಿಲಕ್ ವರ್ಮಾ ತಮ್ಮ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದ 1,000 ರನ್ ಪೂರ್ಣಗೊಳಿಸಿದರು. ಇದರೊಂದಿಗೆ 25 ವರ್ಷ ತುಂಬುವ ಮೊದಲು 1,000 ಟಿ20 ಅಂತಾರಾಷ್ಟ್ರೀಯ ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಗೌರವಕ್ಕೆ ಪಾತ್ರರಾದರು. 23 ವರ್ಷ 31 ದಿನಗಳ ವಯಸ್ಸಿನಲ್ಲಿ, ಕೇವಲ 34 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿರುವುದು ಅವರ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
ಈ ದಾಖಲೆಗೂ ಮುನ್ನ ಅಭಿಷೇಕ್ ಶರ್ಮಾ ಅವರ ಹೆಸರಿನಲ್ಲಿ ಇದ್ದ ಸಾಧನೆಯನ್ನು ತಿಲಕ್ ಮೀರಿಸಿದ್ದು, ಟಿ20ಗಳಲ್ಲಿ 1,000 ರನ್ ಪೂರೈಸಿದ 13ನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನೂ ಗಳಿಸಿದ್ದಾರೆ. ಇದಷ್ಟೇ ಅಲ್ಲ, ವೇಗವಾಗಿ 1,000 ರನ್ ತಲುಪಿದ ಐದನೇ ಭಾರತೀಯನಾಗಿ ಅವರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ; ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ.

