Wednesday, December 10, 2025

‘ದಿ ಡೆವಿಲ್’ ಬಿಡುಗಡೆಗೂ ಮುನ್ನ ಫ್ಯಾನ್ಸ್ ಗೆ ಭಾವನಾತ್ಮಕ ಪತ್ರ! ನೀವೇ ನನ್ನ ಶಕ್ತಿ, ನನ್ನ ಕುಟುಂಬ ಎಂದ ದರ್ಶನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಡಿಸೆಂಬರ್ 11ರಂದು ತೆರೆಕಾಣಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ಬಿಡುಗಡೆಗೂ ಮುನ್ನವೇ ಭರ್ಜರಿ ಚರ್ಚೆ ಹುಟ್ಟಿಸಿದೆ. ಟಿಕೆಟ್ ಬುಕ್ಕಿಂಗ್ ಆರಂಭವಾದಾಗಲೇ ಚಿತ್ರಕ್ಕೆ ದೊರಕುತ್ತಿರುವ ಬೆಂಬಲ ಗಮನ ಸೆಳೆದಿದ್ದು, ಹಲವೆಡೆ ಮುಂಗಡ ಟಿಕೆಟ್‌ಗಳು ಕ್ಷಣಾರ್ಧದಲ್ಲೇ ಸೇಲ್‌ಔಟ್ ಆಗಿವೆ. ಚಿತ್ರ ಬಿಡುಗಡೆಯ ಸಂಭ್ರಮದಲ್ಲಿ ತೊಡಗಿರುವ ಅಭಿಮಾನಿಗಳಿಗೆ ಇದೀಗ ದರ್ಶನ್ ಅವರಿಂದಲೇ ವಿಶೇಷ ಸಂದೇಶವೊಂದು ಲಭಿಸಿದೆ.

ಸದ್ಯ ಜೈಲಿನಲ್ಲಿ ಇರುವ ದರ್ಶನ್, ತಮ್ಮ ಅಭಿಮಾನಿಗಳಿಗೆ ಹೃದಯ ತುಂಬಿದ ಪತ್ರ ಬರೆದು ಪ್ರೀತಿ ಹಾಗೂ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಈ ಸಂದೇಶವನ್ನು ಪತ್ನಿ ವಿಜಯಲಕ್ಷ್ಮೀ ಅಭಿಮಾನಿಗಳವರೆಗೆ ತಲುಪಿಸಿದ್ದಾರೆ. ಅಭಿಮಾನಿಗಳ ಪ್ರೀತಿ, ನಿಲ್ಲದ ಪ್ರಚಾರ ಮತ್ತು ಬೆಂಬಲವೇ ನನಗೆ ಸಂಕಷ್ಟದ ಸಮಯದಲ್ಲಿ ಧೈರ್ಯ ನೀಡುತ್ತಿದೆ ಎಂದು ದರ್ಶನ್ ಹೇಳಿದ್ದಾರೆ. ದೂರದಲ್ಲಿದ್ದರೂ ಕೂಡ ಅಭಿಮಾನಿಗಳು ತನ್ನ ಜೊತೆಯಲ್ಲೇ ಇದ್ದಂತೆ ಭಾಸವಾಗುತ್ತಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಜನರು ಹೇಳುವ ಮಾತುಗಳು ಅಥವಾ ಹರಡಲಾಗುವ ವದಂತಿಗಳ ಬಗ್ಗೆ ಚಿಂತಿಸಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿರುವ ದರ್ಶನ್, ನೀವು ನನ್ನ ಶಕ್ತಿ, ನನ್ನ ಕುಟುಂಬ ಎಂದು ಭಾವುಕವಾಗಿ ಬರೆದಿದ್ದಾರೆ. ತಮ್ಮ ಅನುಪಸ್ಥಿತಿಗೆ ಉತ್ತರವನ್ನು ‘ದಿ ಡೆವಿಲ್’ ಚಿತ್ರದ ಭರ್ಜರಿ ಯಶಸ್ಸಿನ ಮೂಲಕ ನೀಡಬೇಕು ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಗಳ ಏಕತೆ, ಸಮರ್ಪಣೆ ಹಾಗೂ ನಂಬಿಕೆಯೇ ತನ್ನೆದುರು ನಿಂತಿರುವ ದೊಡ್ಡ ಶಕ್ತಿ ಎಂದು ತಿಳಿಸಿರುವ ದರ್ಶನ್, ಆದಷ್ಟು ಬೇಗ ಎಲ್ಲರನ್ನೂ ಭೇಟಿ ಮಾಡುವ ಆಶಯದೊಂದಿಗೆ ಸಂದೇಶ ಮುಗಿಸಿದ್ದಾರೆ. ‘ನಿಮ್ಮ ದಾಸ, ದರ್ಶನ’ ಎಂಬ ಸಾಲು ಅವರ ಭಾವನೆಗೆ ಸಾಕ್ಷಿಯಾಗಿದೆ.

error: Content is protected !!