ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಸಾದ್ಯಪುರ ಸಮೀಪದಲ್ಲಿ ಇರುವ ಕಾಟನ್ ಮಿಲ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡ ಭಾರೀ ಆರ್ಥಿಕ ನಷ್ಟಕ್ಕೆ ಕಾರಣವಾಗಿದೆ. ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಆರಂಭವಾದ ಬೆಂಕಿ ಕ್ಷಣಾರ್ಧದಲ್ಲಿ ಮಿಲ್‌ನೊಳಗೆ ವ್ಯಾಪಕವಾಗಿ ಹರಡಿದ್ದು, ಸಂಗ್ರಹಿಸಿಟ್ಟಿದ್ದ ಕಾಟನ್ ಬೆಂಕಿಗಾಹುತಿಯಾಗಿದೆ.
ಸಾಹೇಲ್‌ಗೆ ಎಂಬುವರಿಗೆ ಸೇರಿದ್ದ ಶ್ರೀ ಲಕ್ಷ್ಮಿ ಬಾಲಾಜಿ ಕಾಟನ್ ಮಿಲ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಮಿಲ್‌ನೊಳಗೆ ಇದ್ದ ಕಾಟನ್ ಬಂಡಲ್ ಮತ್ತು ಸಂಗ್ರಹಿತ ದಾಸ್ತಾನಿಗೆ ಬೆಂಕಿ ಹಿಡಿದು, ಸುಮಾರು 60 ಟನ್‌ಗೂ ಅಧಿಕ ಕಾಟನ್ ಸಂಪೂರ್ಣವಾಗಿ ಸುಟ್ಟುಹೋಗಿದೆ. ಇದರಿಂದ ಅಂದಾಜು ಒಂದು ಕೋಟಿ ರೂಪಾಯಿ ಮೌಲ್ಯದ ನಷ್ಟ ಉಂಟಾಗಿದೆ, ಆದರೆ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಬೆಂಕಿಯ ತಾಪಮಾನ ಹೆಚ್ಚಾಗಿದ್ದರಿಂದ ಕೆಲ ಯಂತ್ರೋಪಕರಣಗಳೂ ಹಾನಿಗೊಳಗಾಗಿದ್ದು, ಮಿಲ್‌ನ ಒಳಾಂಗಣ ಭಾಗಕ್ಕೂ ಗಂಭೀರ ಹಾನಿಯಾಗಿದೆ. ಸ್ಥಳೀಯರು ಬೆಂಕಿ ಕಾಣಿಸಿಕೊಂಡ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಯಾದಗಿರಿ ಮತ್ತು ಶಹಾಪುರದಿಂದ ಆಗಮಿಸಿದ ಸಿಬ್ಬಂದಿ ಹಲವು ಗಂಟೆಗಳ ಶ್ರಮದ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

