ಹೊಸದಿಗಂತ ವರದಿ ಬೆಳಗಾವಿ:
ವಿಧಾನ ಮಂಡಲ ಅಧಿವೇಶನ ಮೂರನೇಯ ದಿನದಂದು ವಿವಿಧ ಸಂಘಟನೆಗಳು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರಾಯಬಾಗ ತಾಲೂಕಿನ ಕುಡಚಿ ಗ್ರಾಮದ ರೈತ ಯಲ್ಲಪ್ಪಾ ಹಿರೇಕುರಬರ (35) ಅವರು ಆಕಸ್ಮಿಕವಾಗಿ ಅಸ್ವಸ್ಥರಾಗಿದ್ದಾರೆ.
ಬುಧವಾರ ಸುವರ್ಣಸೌಧದ ಪಕ್ಕದಲ್ಲಿರುವ ಪ್ರತಿಭಟನಾ ಸ್ಥಳದಲ್ಲಿ, ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಹೋರಾಟ ನಡೆಸುತ್ತಿರುವ ವೇಳೆ ಭಾರೀ ಒತ್ತಡ, ಜನಸಮೂಹ ಹಾಗೂ ದೀರ್ಘ ಕಾಲದಿಂದ ಕೂಗಾಟ, ಘೋಷಣೆಗಳ ನಡುವೆಯೇ ರೈತರಿಗೆ ಪೀಟ್ಸ್ (ಬಿಪಿ/ಛಕ್ಕರ ಏರಿಳಿತ ಶಂಕೆ) ಉಂಟಾಗಿರುವುದರಿಂದ ತಲೆ ಸುತ್ತಿ ನೆಲಕ್ಕೆ ಬಿದ್ದಿದ್ದಾರೆ.
ಘಟನಾ ಸ್ಥಳಕ್ಕೆ ವೈದ್ಯಕೀಯ ಸಿಬ್ಬಂದಿ ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿ, ಅವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಂತರ ಕೆಲವು ಕ್ಷಣಗಳು ಪ್ರತಿಭಟನೆ ಸ್ಥಳದಲ್ಲಿ ಆತಂಕ ಹಾಗೂ ಗೊಂದಲ ವಾತಾವರಣ ನಿರ್ಮಾಣಕೊಂಡಿತ್ತು, ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಯಿತು. ಸಹ ರೈತರು, ಸಂಘಟಕರು ಹಾಗೂ ಪೊಲೀಸರು ತಕ್ಷಣವೇ ಅಗತ್ಯ ನೆರವು ಒದಗಿಸಿದರು.
ಬೇಡಿಕೆಗಳು ಇನ್ನೂ ಸ್ಪಷ್ಟ ಪರಿಹಾರ ಕಂಡುಕೊಳ್ಳದ ಹಿನ್ನಲೆಯಲ್ಲಿ ಆಗುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ರೈತರ ಮಾನಸಿಕ ಹಾಗೂ ಶಾರೀರಿಕ ಒತ್ತಡ ಹೆಚ್ಚಾಗಿರುವುದಾಗಿ ಸಂಘಟಕರು ತಿಳಿಸಿದ್ದಾರೆ. ಯಲ್ಲಪ್ಪಾ ಹಿರೇಕುರಬರ ಅವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಆಸ್ಪತ್ರೆಗೆ ಸೇರಿದ ಮೂಲಗಳು ತಿಳಿಸಿವೆ. ರೈತರಿಗೆ ಬೇಕಾದ ಬೇಡಿಕೆಗಳನ್ನು ತ್ವರಿತವಾಗಿ ಮೌಲ್ಯಮಾಪನ ಮಾಡಿ ಸರಕಾರ ಕೂಡಲೇ ಕ್ರಮ ಕೈಗೊಳಬೇಕೆಂದು ಪ್ರತಿಭಟನೆಯಲ್ಲಿ ಒತ್ತಾಯಿಸಿದರು.

