ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಜನರಿಗೆ ತಾತ್ಕಾಲಿಕ ನೆಮ್ಮದಿ ನೀಡಿದ್ದರೂ, ಅದೊಂದೇ ಸಾಲದು ಎಂಬ ಅಭಿಪ್ರಾಯ ಶಾಸಕಾಂಗದೊಳಗೆ ಕೇಳಿಬಂದಿದೆ. ಕ್ಷೇತ್ರಮಟ್ಟದಲ್ಲಿ ಸ್ಪಷ್ಟವಾದ ಅಭಿವೃದ್ಧಿ ಕೆಲಸಗಳು ನಡೆಯದೇ ಹೋದರೆ ಜನಮನ ಗೆಲ್ಲಲು ಕಷ್ಟವಾಗುತ್ತದೆ ಎಂಬ ಸಂದೇಶವನ್ನು ಕಾಂಗ್ರೆಸ್ ಶಾಸಕರು ಪಕ್ಷದೊಳಗಿನ ಸಭೆಯಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ಹಿರಿಯ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ವಿಚಾರ ಗಂಭೀರವಾಗಿ ಚರ್ಚೆಗೆ ಬಂದಿದೆ. ಗ್ಯಾರಂಟಿ ಯೋಜನೆಗಳೊಂದಿಗೆ ರಸ್ತೆ, ಮೂಲಸೌಕರ್ಯ, ನೀರು, ಶಿಕ್ಷಣ ಹಾಗೂ ಆರೋಗ್ಯದಂತಹ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ಸ್ಪಷ್ಟವಾಗಿ ಕಾಣಬೇಕೆಂಬ ಸಲಹೆಯನ್ನು ಹಲವರು ನೀಡಿದ್ದಾರೆ ಎಂದು ತಿಳಿಸಿದರು.
ಜನರಿಗೆ ಸೌಲಭ್ಯಗಳ ಜೊತೆಗೆ ಕೆಲಸಗಳೂ ಆಗುವಂತೆ ಮಾಡಿದರೆ ಮಾತ್ರ ಸರ್ಕಾರದ ಕಾರ್ಯಾಚರಣೆಗೆ ನಿಜವಾದ ಒಳ್ಳೆಯ ಹೆಸರು ಬರುತ್ತದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ ಎಂದರು.
ಇನ್ನು ರಾಜ್ಯದ ನಾಯಕತ್ವ ಬದಲಾವಣೆ ಕುರಿತ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಐಸಿಸಿ ಅಧ್ಯಕ್ಷರ ಸ್ಪಷ್ಟ ಸೂಚನೆಯಂತೆ ಯಾವುದೇ ಸಚಿವರು ಅಥವಾ ಶಾಸಕರು ಮುಖ್ಯಮಂತ್ರಿ ಬದಲಾವಣೆ ವಿಚಾರವನ್ನು ಚರ್ಚಿಸುವುದಕ್ಕೂ ಪ್ರಸ್ತಾಪಿಸುವುದಕ್ಕೂ ಅವಕಾಶ ಇಲ್ಲ ಎಂದು ಹೇಳಿದರು.

