ಹೊಸದಿಗಂತ ಡಿಜಿಟಲ್ ಡೆಸ್ಕ್;
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡುವ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿಯ ಸರ್ಕಿಟ್ ಹೌಸ್‌ನಲ್ಲಿ ಕೆಎಸ್‌ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಭೇಟಿ ನಂತರ ಮಾತನಾಡಿದ ಅವರು, ನಮಗೆ ಕ್ರಿಕೆಟ್ ಪಂದ್ಯಾವಳಿ ನಿಲ್ಲಿಸಬೇಕು ಎನ್ನುವ ಯಾವುದೇ ಉದ್ದೇಶವಿಲ್ಲ. ಆದರೆ ಜನಜಂಗುಳಿಯ ನಿಯಂತ್ರಣ ಕ್ರಮಗಳ ಬಗ್ಗೆ ಆಲೋಚಿಸಬೇಕು. ಜೊತೆಗೆ ಮೈಕಲ್ ಡಿ ಕುನ್ಹಾ ಸಮಿತಿ ನೀಡಿರುವ ಸಲಹೆಗಳನ್ನು ಹಂತ, ಹಂತವಾಗಿ ಪಾಲನೆ ಮಾಡುವುದು ನಮ್ಮ ಆಲೋಚನೆ. ಇದನ್ನು ವೆಂಕಟೇಶ್ ಪ್ರಸಾದ್ ಅವರು ಕೂಡ ಒಪ್ಪಿಕೊಂಡಿದ್ದಾರೆ ಎಂದರು.
ನಮ್ಮ ರಾಜ್ಯದ ಗೌರವ, ಸ್ವಾಭಿಮಾನಕ್ಕೆ ಯಾವುದೇ ಧಕ್ಕೆ ಆಗದ ರೀತಿಯಲ್ಲಿ ಕ್ರಿಕೆಟ್ ಅಭಿಮಾನಿಗಳ ಭಾವನೆಗಳಿಗೆ ಸ್ಪಂದಿಸಲು ನಮ್ಮ ಸರ್ಕಾರ ಬದ್ದವಾಗಿದೆ. ಐಪಿಎಲ್ ಸೇರಿದಂತೆ ಯಾವುದೇ ಪಂದ್ಯಗಳು ಬೆಂಗಳೂರಿನಿಂದ ಹೊರಗೆ ಹೋಗಲು ಬಿಡುವುದಿಲ್ಲ. ಒಗ್ಗೂಡಿ ಕೆಲಸ ಮಾಡೋಣ ಎಂದು ತಿಳಿಸಿದ್ದೇನೆ ಎಂದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂದೆ ನಡೆಯುವ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡಬೇಕು ಎಂದು ನೂತನವಾಗಿ ಕೆಎಸ್ ಸಿಎ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಮತ್ತು ತಂಡದವರು ಮುಖ್ಯಮಂತ್ರಿಯವರು ಹಾಗೂ ನನ್ನನ್ನು ಭೇಟಿ ಮಾಡಿ ಸರ್ಕಾರದ ಸಹಕಾರ ಕೋರಿದ್ದಾರೆ. ಮಾಜಿ ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ ಅವರ ಬೆಂಬಲ ಹೊಂದಿರುವ ಹಾಗೂ ನೂತನ ಜವಾಬ್ದಾರಿ ಹೊತ್ತಿರುವ ವೆಂಕಟೇಶ್ ಪ್ರಸಾದ್ ಅವರ ತಂಡ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಆಶಿಸುತ್ತೇನೆ. ಇವರಿಗೆ ಸರ್ಕಾರದ ಪರವಾಗಿ ಅಭಿನಂದನೆಗಳನ್ನು ತಿಳಿಸಿದ್ದೇನೆ ಎಂದು ಹೇಳಿದರು.

