Friday, December 12, 2025

ಜೈಲಿನಲ್ಲಿ ದರ್ಶನ್‌ಗೆ ಸಿಕ್ತು ಟಿವಿ ಸೌಲಭ್ಯ: ‘ಬಾಹ್ಯ ಪ್ರಪಂಚ’ದ ಸಂಪರ್ಕ ಕಡಿತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೂಲ ಸೌಕರ್ಯಗಳ ಕೊರತೆಯ ಬಗ್ಗೆ ನ್ಯಾಯಾಲಯದ ಮೊರೆ ಹೋಗಿದ್ದ ವಿಚಾರ ಈಗ ಹೊಸ ತಿರುವು ಪಡೆದಿದೆ. ಈ ಹಿಂದೆ ಹಾಸಿಗೆ, ದಿಂಬು, ಬಾಚಣಿಗೆ, ಕನ್ನಡಿ, ಬ್ಯಾರಕ್ ಬದಲಾವಣೆ ಮತ್ತು ವಾಕಿಂಗ್ ಅವಕಾಶ ಸೇರಿದಂತೆ ಹಲವು ಸವಲತ್ತುಗಳಿಗಾಗಿ ನ್ಯಾಯಾಧೀಶರ ಎದುರು ದರ್ಶನ್ ಮನವಿ ಮಾಡಿಕೊಂಡಿದ್ದರು. ಒಂದು ಹಂತದಲ್ಲಿ ಜೈಲಿನ ವ್ಯವಸ್ಥೆ ಸರಿಯಿಲ್ಲವೆಂದು ಬೇಸರಗೊಂಡು, “ಇಲ್ಲಿ ಇರಲು ಆಗುತ್ತಿಲ್ಲ, ನನಗೆ ವಿಷ ಕೊಟ್ಟುಬಿಡಿ” ಎಂದು ಕೂಡಾ ನ್ಯಾಯಾಲಯವನ್ನು ಕೇಳಿಕೊಂಡಿದ್ದರು.

ದರ್ಶನ್ ಅವರ ಮನವಿಯ ವಿಚಾರಣೆ ನಡೆಸಿ, ಜೈಲಿಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದ ತಂಡವನ್ನು ಕಳುಹಿಸಿ ವರದಿ ತರಿಸಿಕೊಂಡ ನಂತರ, ನ್ಯಾಯಾಲಯದ ಆದೇಶದ ಮೇರೆಗೆ ದರ್ಶನ್‌ಗೆ ಕೆಲವು ಸೌಲಭ್ಯಗಳು ಲಭ್ಯವಾಗಿವೆ. ಇದರ ಭಾಗವಾಗಿ, ದರ್ಶನ್ ಬೇಡಿಕೆಯಂತೆ ಇದೀಗ ಅವರು ಇರುವ ಬ್ಯಾರಕ್‌ಗೆ ಟಿವಿ ಅಳವಡಿಸಲಾಗಿದೆ.

ದರ್ಶನ್ ಮನವಿ ಮಾಡಿದ್ದ ಟಿವಿ ಸೌಲಭ್ಯ ಲಭ್ಯವಾಗಿದ್ದರೂ, ಅವರು ಬಯಸಿದ್ದ ಸಂಪೂರ್ಣ ಲಾಭ ಸಿಕ್ಕಿಲ್ಲ. ಜೈಲು ಸಿಬ್ಬಂದಿ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸುತ್ತಿದ್ದು, ದರ್ಶನ್‌ಗೆ ನೀಡಲಾಗಿರುವ ಟಿವಿಯಲ್ಲಿ ಕೇವಲ ಮನರಂಜನಾ ಚಾನೆಲ್‌ಗಳನ್ನು ಮಾತ್ರ ಪ್ರಸಾರವಾಗುವಂತೆ ಬದಲಾವಣೆ ಮಾಡಿದ್ದಾರೆ. ಯಾವುದೇ ನ್ಯೂಸ್ ಚಾನೆಲ್ ಅಥವಾ ಪ್ರಸಕ್ತ ವಿದ್ಯಮಾನಗಳಿಗೆ ಸಂಬಂಧಿಸಿದ ಚಾನೆಲ್‌ಗಳು ಇದರಲ್ಲಿ ಲಭ್ಯವಿಲ್ಲ.

ಹೀಗಾಗಿ, ಜೈಲಿನ ಹೊರಗೆ ಏನು ನಡೆಯುತ್ತಿದೆ, ಅದರಲ್ಲೂ ಮುಖ್ಯವಾಗಿ ಅವರ ಮುಂಬರುವ ಚಿತ್ರ ‘ಡೆವಿಲ್’ ಸಿನಿಮಾದ ಬಿಡುಗಡೆ ಅಪ್‌ಡೇಟ್ಸ್ ಮತ್ತು ಸಾರ್ವಜನಿಕ ಪ್ರತಿಕ್ರಿಯೆಗಳ ಬಗ್ಗೆ ತಿಳಿದುಕೊಳ್ಳಲು ದರ್ಶನ್‌ಗೆ ಸಾಧ್ಯವಾಗುತ್ತಿಲ್ಲ. ಹಾಡುಗಳು, ಸಿನಿಮಾ ಹಾಗೂ ಧಾರಾವಾಹಿಗಳನ್ನು ಮಾತ್ರ ನೋಡಬೇಕಾದ ಪರಿಸ್ಥಿತಿ ಬಂದಿರುವುದರಿಂದ ದರ್ಶನ್ ಅವರಿಗೆ ಸಹಜವಾಗಿಯೇ ಬೇಸರ ಮೂಡಿದೆ ಎನ್ನಲಾಗಿದೆ. ಹೊರಗಿನ ಪ್ರಪಂಚ ಮತ್ತು ತಮ್ಮ ವೃತ್ತಿಜೀವನದ ಬೆಳವಣಿಗೆಯಿಂದ ದೂರ ಉಳಿಯುವಂತೆ ಜೈಲು ಸಿಬ್ಬಂದಿಯ ಈ ಕಠಿಣ ನಿಯಮವು ಮಾಡಿದೆ.

error: Content is protected !!