ಹೊಸದಿಗಂತ ಡಿಜಿಟಲ್ ಡೆಸ್ಕ್:
ಸದ್ಯ ನಟ ದರ್ಶನ್ ಅವರು ಜೈಲಿನಲ್ಲಿದ್ದರೂ, ಅವರ ಬಹುನಿರೀಕ್ಷಿತ ಚಿತ್ರ ‘ಡೆವಿಲ್’ ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಗಳಿಸಿದೆ. ಡಿಸೆಂಬರ್ 11 ರಂದು ರಾಜ್ಯಾದ್ಯಂತ ತೆರೆಕಂಡ ಈ ಸಿನಿಮಾವು ಮೊದಲ ದಿನವೇ ಎಷ್ಟು ಕೋಟಿ ಕಲೆಕ್ಷನ್ ಮಾಡಬಹುದು ಎಂಬ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.
ಬಾಕ್ಸ್ ಆಫೀಸ್ ಕಲೆಕ್ಷನ್ ಲೆಕ್ಕ ನೀಡುವ ಪ್ರಮುಖ ಸಂಸ್ಥೆ sacnilk ವರದಿಯ ಪ್ರಕಾರ, ‘ಡೆವಿಲ್’ ಚಿತ್ರವು ಬಿಡುಗಡೆಯಾದ ಮೊದಲ ದಿನವೇ ಸುಮಾರು 10 ಕೋಟಿ ಆಸುಪಾಸಿನಲ್ಲಿ ಗಳಿಕೆ ಮಾಡಿದೆ. ಈ ಭರ್ಜರಿ ಕಲೆಕ್ಷನ್ ನೋಡಿ ದರ್ಶನ್ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
‘ಕಾಂತಾರ: ಚಾಪ್ಟರ್ 1’ ಬಿಡುಗಡೆಯ ಬಳಿಕ ಕನ್ನಡ ಚಿತ್ರರಂಗದಲ್ಲಿ ಒಂದು ಚಿತ್ರ ಮೊದಲ ದಿನವೇ ಇಷ್ಟು ದೊಡ್ಡ ಮಟ್ಟದ ಗಳಿಕೆ ಮಾಡಿರುವುದು ಇದೇ ಮೊದಲು ಎಂಬ ಹೆಗ್ಗಳಿಕೆಗೆ ‘ಡೆವಿಲ್’ ಪಾತ್ರವಾಗಿದೆ.
ಕನ್ನಡ ಸಿನಿಮಾಗಳನ್ನು ನೋಡಲು ಜನ ಥಿಯೇಟರ್ಗಳಿಗೆ ಬರುವುದಿಲ್ಲ ಎಂಬ ಹಳೆಯ ಆರೋಪವಿದ್ದರೂ, ಸ್ಟಾರ್ ನಟರ ಸಿನಿಮಾಗಳು ಬಂದಾಗ ಜನರು ಮುಗಿಬಿದ್ದು ನೋಡುತ್ತಾರೆ ಎಂಬುದಕ್ಕೆ ‘ಡೆವಿಲ್’ ಮತ್ತೊಂದು ಸಾಕ್ಷಿಯಾಗಿದೆ. ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ದರ್ಶನ್ ಅವರು ಜೈಲಿನಲ್ಲಿರುವುದರಿಂದ ಚಿತ್ರದ ಪ್ರಚಾರಕ್ಕೆ ಕೊರತೆಯಾಗುವ ಆತಂಕವಿತ್ತು. ಆದರೆ, ದರ್ಶನ್ ಅವರ ನಿಷ್ಠಾವಂತ ಅಭಿಮಾನಿಗಳು ಈ ಜವಾಬ್ದಾರಿಯನ್ನು ಹೊತ್ತು ರಾಜ್ಯಾದ್ಯಂತ ಸಿನಿಮಾವನ್ನು ಯಶಸ್ವಿಯಾಗಿ ಪ್ರಚಾರ ಮಾಡಿ ಚಿತ್ರಮಂದಿರಗಳತ್ತ ಜನರನ್ನು ಸೆಳೆದರು.
ಮೊದಲ ದಿನ 10 ಕೋಟಿ ಗಳಿಕೆ ಮಾಡುವುದು ಕನ್ನಡ ಚಿತ್ರರಂಗಕ್ಕೆ ಒಂದು ಮಹತ್ವದ ಮೈಲಿಗಲ್ಲು. ಇಷ್ಟು ದೊಡ್ಡ ಕಲೆಕ್ಷನ್ ಆಗಲು ಚಿತ್ರದ ಟಿಕೆಟ್ ದರ ಕೂಡ ಪ್ರಮುಖ ಕಾರಣವಾಗಿದೆ. ಪಿವಿಆರ್, ಐನಾಕ್ಸ್ ಸೇರಿದಂತೆ ಹೆಚ್ಚಿನ ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ದರ ಕನಿಷ್ಠ 500 ರೂಪಾಯಿಗಳಿಂದ ಶುರುವಾಗಿದ್ದರೆ, ಏಕಪರದೆ ಚಿತ್ರಮಂದಿರಗಳಲ್ಲಿ 400 ರೂಪಾಯಿ ದರವನ್ನು ನಿಗದಿಪಡಿಸಲಾಗಿತ್ತು.
ಸದ್ಯ sacnilk ವರದಿ ಮಾಡಿರುವ ಈ ಮೊತ್ತವು ಕೇವಲ ಕರ್ನಾಟಕದ ಗಳಿಕೆಯಾಗಿದ್ದು, ವಿದೇಶದ ಕಲೆಕ್ಷನ್ಗಳು ಸೇರಿದರೆ ಒಟ್ಟು ಗಳಿಕೆ ಇನ್ನಷ್ಟು ಹೆಚ್ಚಲಿದೆ. ಈ ಕುರಿತು ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬೀಳುವುದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

