Friday, December 12, 2025

75ನೇ ವರ್ಷಕ್ಕೆ ಕಾಲಿಟ್ಟ ‘ತಲೈವಾ’: ಮೋದಿ, ಸ್ಟಾಲಿನ್ ಸೇರಿ ಗಣ್ಯರಿಂದ ಶುಭಾಶಯಗಳ ಮಹಾಪೂರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್‌ ಅವರು ತಮ್ಮ 75ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ದೇಶದ ಹಲವು ಗಣ್ಯರು ಅವರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಎಕ್ಸ್‌’ ಖಾತೆಯ ಮೂಲಕ ರಜನಿಕಾಂತ್‌ಗೆ ಶುಭ ಹಾರೈಸಿ, ನಟನ ವೃತ್ತಿಜೀವನವನ್ನು ಉಲ್ಲೇಖಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ರಜನಿಕಾಂತ್‌ ಅವರ ಅಭಿನಯವು ಹಲವು ಪೀಳಿಗೆಗಳನ್ನು ಆಕರ್ಷಿಸಿದೆ ಮತ್ತು ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಅವರ ವೈವಿಧ್ಯಮಯ ಪಾತ್ರಗಳು ಒಂದು ಬೆಂಚ್‌ಮಾರ್ಕ್‌ ಸೃಷ್ಟಿಸಿವೆ,” ಎಂದು ಮೋದಿ ಶ್ಲಾಘಿಸಿದ್ದಾರೆ. ಈ ವರ್ಷವು ಚಲನಚಿತ್ರ ಜಗತ್ತಿನಲ್ಲಿ ಅವರು 50 ವರ್ಷಗಳನ್ನು ಪೂರೈಸಿದ ಕಾರಣದಿಂದ ಇನ್ನಷ್ಟು ಮಹತ್ವದ್ದಾಗಿದೆ ಎಂದು ಹೇಳಿದ ಪ್ರಧಾನಿ, ರಜನಿಕಾಂತ್‌ ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುವುದಾಗಿ ಬರೆದುಕೊಂಡಿದ್ದಾರೆ.

ಪ್ರಧಾನಿ ಮೋದಿ ಅವರಲ್ಲದೆ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಖ್ಯಾತ ನಟ ಧನುಷ್ ಸೇರಿದಂತೆ ಚಲನಚಿತ್ರ ಮತ್ತು ರಾಜಕೀಯ ವಲಯದ ಅನೇಕ ಪ್ರಮುಖ ವ್ಯಕ್ತಿಗಳು ಸಹ ತಮ್ಮ ಸಾಮಾಜಿಕ ಮಾಧ್ಯಮಗಳ ಮೂಲಕ ‘ತಲೈವಾ’ ಅವರಿಗೆ ಶುಭ ಹಾರೈಸಿದ್ದಾರೆ.

error: Content is protected !!