ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ಆಸೆಯನ್ನು ಹೊಂದಿರುವುದಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳುವ ಮೂಲಕ ಪಕ್ಷದ ಆಂತರಿಕ ಚರ್ಚೆಗೆ ಮತ್ತಷ್ಟು ಇಂಬು ನೀಡಿದ್ದಾರೆ. ಡಿಕೆಶಿ ಸಿಎಂ ಆಗಬೇಕು ಎಂಬುದು ತಮ್ಮ ವೈಯಕ್ತಿಕ ಆಸೆಯೂ ಆಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ಗುರುವಾರ ರಾತ್ರಿ ಬೆಳಗಾವಿಯ ಹೊರವಲಯದಲ್ಲಿರುವ ದೊಡ್ಡಣ್ಣವರ್ ಫಾರ್ಮ್‌ಹೌಸ್‌ನಲ್ಲಿ ನಡೆದಿದ್ದ ಪ್ರಮುಖ ಕಾಂಗ್ರೆಸ್ ನಾಯಕರ ಔತಣ ಕೂಟಕ್ಕೆ ತಮಗೂ ಆಹ್ವಾನವಿತ್ತು ಎಂಬುದನ್ನು ಜಮೀರ್ ಖಾನ್ ಖಚಿತಪಡಿಸಿದ್ದಾರೆ. ಆದರೆ, ವೈಯಕ್ತಿಕ ಕಾರಣದಿಂದ ಮತ್ತು ಸ್ನೇಹಿತರೊಬ್ಬರ ಮನೆಗೆ ತೆರಳಿದ್ದ ಕಾರಣದಿಂದ ತಾವು ಈ ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಡಿಕೆಶಿ ಅವರ ಸಿಎಂ ಆಕಾಂಕ್ಷೆಯನ್ನು ಬೆಂಬಲಿಸಿದರೂ, ಈ ಕುರಿತು ಅಂತಿಮ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂಬುದನ್ನು ಸಚಿವ ಜಮೀರ್ ಅಹ್ಮದ್ ಖಾನ್ ಪುನರುಚ್ಚರಿಸಿದ್ದಾರೆ. “ನಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ನಾವು ಹೇಳಬಹುದು, ಆದರೆ ನಮ್ಮ ಪಕ್ಷ ಹೈಕಮಾಂಡ್‌ನ ನಿರ್ದೇಶನ ಮತ್ತು ತೀರ್ಮಾನಕ್ಕೆ ಬದ್ಧವಾಗಿರುತ್ತದೆ” ಎಂದು ಅವರು ಹೇಳಿದ್ದಾರೆ. ಈ ಹೇಳಿಕೆಯು, ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಅಧಿಕಾರ ಹಂಚಿಕೆ ಮತ್ತು ಮುಂದಿನ ನಾಯಕತ್ವದ ಕುರಿತಾದ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

