ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಉದ್ಯೋಗ ಮತ್ತು ಕೃಷಿಯ ಅನಿಶ್ಚಿತತೆಯಿಂದಾಗಿ ಯುವ ರೈತರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎಂದು ದೂರಿದ ರೈತ ಮಕ್ಕಳು, ರೈತರನ್ನು ಮದುವೆಯಾಗುವ ಯುವತಿಯರಿಗೆ 5 ಲಕ್ಷ ರೂ. ಪ್ರೋತ್ಸಾಹಧನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ರೈತರು, ನಿರುದ್ಯೋಗ, ಸರ್ಕಾರಿ ನೇಮಕಾತಿ ಇಲ್ಲದಿರುವುದು ಹಾಗೂ ಖಾಸಗಿ ಕಂಪನಿಗಳು ರಾಜ್ಯಕ್ಕೆ ಬಾರದಿರುವ ಸರ್ಕಾರದ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇತ್ತ ಕೃಷಿ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಇಲ್ಲ, ನೀರು ಇಲ್ಲ; ಒಟ್ಟಾರೆಯಾಗಿ ಕೃಷಿಯನ್ನು ನಂಬಿದವರ ಜೀವನ ಮೂರಾಬಟ್ಟೆಯಾಗಿದೆ ಎಂದು ದೂರಿದರು.
ಕೃಷಿಯನ್ನೇ ನಂಬಿ ಬದುಕು ಕಟ್ಟಿಕೊಳ್ಳಲು ಬಯಸುವ ಯುವ ರೈತರಿಗೆ ಹೆಣ್ಣು ಸಿಗದಿರುವುದು ಅವರ ಬದುಕಿನ ಭವಿಷ್ಯವನ್ನೇ ಅನಿಶ್ಚಿತಗೊಳಿಸಿದೆ. ಹಾಗಾಗಿ, ಶಾದಿ ಭಾಗ್ಯದ ಮಾದರಿಯಲ್ಲಿ ರೈತ ಮಕ್ಕಳನ್ನು ಮದುವೆಯಾಗುವ ಯುವತಿಯರಿಗೆ 5 ಲಕ್ಷ ರೂ. ಪ್ರೋತ್ಸಾಹಧನ ನೀಡುವುದರ ಜೊತೆಗೆ, ಯುವಕ-ಯುವತಿಯರಿಗೆ ಸರ್ಕಾರದ ವತಿಯಿಂದ ಸರಳ ಸಾಮೂಹಿಕ ವಿವಾಹ ಏರ್ಪಡಿಸಿ ಅವರ ಬದುಕಿಗೆ ಗ್ಯಾರಂಟಿ ನೀಡಬೇಕು ಎಂದು ರೈತರು ಆಗ್ರಹಿಸಿದರು.
ಈ ಯೋಜನೆಯು ಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ, ಉತ್ತರ ಕರ್ನಾಟಕ, ಹಳೆಮೈಸೂರು ಭಾಗ ಎಂಬ ಯಾವುದೇ ಪ್ರಾದೇಶಿಕ ತಾರತಮ್ಯವಿಲ್ಲದೆ ಅಖಂಡ ಕರ್ನಾಟಕಕ್ಕೆ ಅನ್ವಯವಾಗಬೇಕು ಎಂದು ಒತ್ತಾಯಿಸಲಾಯಿತು. ಈ ಕುರಿತು ಅಪರ ಜಿಲ್ಲಾಧಿಕಾರಿ ಶಿವಾನಂದಮೂರ್ತಿ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ರೈತ ಮಕ್ಕಳಾದ ಆನಂದ, ಗೊರವಾಲೆ ಶಿವಣ್ಣ, ಹಾಗೂ ಮುಖಂಡರಾದ ಸಿ.ಟಿ. ಮಂಜುನಾಥ್, ಹೊಸಹಳ್ಳಿ ಶಿವು, ಜಯರಾಮು, ಬಿ.ಟಿ. ಶಿವಲಿಂಗಯ್ಯ, ವೈರಮುಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.

