ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪೊಲೀಸ್ ಠಾಣೆಯ ಆವರಣದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಓಡಾಡುತ್ತಾ ಪ್ರತ್ಯಕ್ಷವಾದ ಚಿರತೆ ಮರಿಯೊಂದು ಪೊಲೀಸರ ಕಣ್ಣಿಗೆ ಬಿದ್ದಿದೆ. ಜನರನ್ನು ಮತ್ತು ಪೊಲೀಸರನ್ನು ಕಂಡ ಈ ಚಿರತೆ ಮರಿಯು ಭಯಭೀತಗೊಂಡು, ತಕ್ಷಣವೇ ಠಾಣಾ ಆವರಣದಲ್ಲಿ ನಿಂತಿದ್ದ ಹಳೆಯದಾದ ಒಂದು ಕಾರಿನೊಳಗೆ ಹತ್ತಿ, ಸೀಟಿನಡಿ ಅವಿತುಕೊಂಡಿದೆ.
ಚಿರತೆ ಮರಿಯನ್ನು ನೋಡಿ ಕೂಡಲೇ ಎಚ್ಚೆತ್ತ ಗುಡಿಬಂಡೆ ಪೊಲೀಸರು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ಜಂಟಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಹಳೆಯ ಕಾರಿನೊಳಗೆ ಅವಿತುಕೊಂಡಿರುವ ಚಿರತೆ ಮರಿಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲು ಅಧಿಕಾರಿಗಳ ತಂಡವು ಸದ್ಯ ಕಾರಿನ ಸುತ್ತಲೂ ಬಲೆ ಹಾಕಿ ಕಾರ್ಯಪ್ರವೃತ್ತವಾಗಿದೆ.
ಪೊಲೀಸ್ ಠಾಣೆಯಲ್ಲೇ ಚಿರತೆ ಮರಿ ಕಾಣಿಸಿಕೊಂಡಿರುವುದು ಸ್ಥಳೀಯವಾಗಿ ಕುತೂಹಲ ಮತ್ತು ಆತಂಕಕ್ಕೆ ಕಾರಣವಾಗಿದೆ. ಅದನ್ನು ಸುರಕ್ಷಿತವಾಗಿ ಸೆರೆ ಹಿಡಿಯುವ ಕಾರ್ಯ ಭರದಿಂದ ಸಾಗಿದೆ.

