Saturday, December 13, 2025

ಗೃಹ ಸಚಿವ ಪರಮೇಶ್ವರರ ʼಧ್ವಂಸʼ ಹೇಳಿಕೆಗೆ ಪಿ. ಚಿದಂಬರಂ ಗರಂ: ಅಷ್ಟಕ್ಕೂ ಆಗಿದ್ದೇನು?

ರಾಜ್ಯಾದ್ಯಂತ ಡ್ರಗ್ಸ್ ಮಾರಾಟವನ್ನು ತಡೆಯುವ ವಿಶಾಲ ಕಾರ್ಯತಂತ್ರದ ಭಾಗವಾಗಿ ಮಾದಕ ದ್ರವ್ಯ ವ್ಯಾಪಾರದಲ್ಲಿ ತೊಡಗಿರುವ ವಿದೇಶಿ ಪ್ರಜೆಗಳು ವಾಸಿಸುವ ಮನೆಗಳನ್ನು ಕೆಡವುದು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ ಎಂಬ ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿಕೆಗೆ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಆಘಾತ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಚಿದಂಬರಂ, ಕಾಂಗ್ರೆಸ್ ಬುಲ್ಡೋಜರ್ ನ್ಯಾಯ ಕ್ಕೆ ವಿರುದ್ಧವಾಗಿದೆ. ಮನೆಗಳನ್ನು ಕೆಡವುದರ ಬಗ್ಗೆ ಸುಪ್ರೀಂ ಕೋರ್ಟ್‌ನ ದೃಷ್ಟಿಕೋನವನ್ನು ವಿರೋಧಿಸಿ ಅಕ್ರಮ ಮಾರ್ಗದಲ್ಲಿ ಹೋಗದಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದ್ದಾರೆ.

ಡ್ರಗ್ಸ್ ಮಾರಾಟಗಾರರಿರುವ ಕಟ್ಟಡ ಕೆಡವಲು ಗೃಹ ಸಚಿವರ ಹೇಳಿಕೆಯ ವರದಿಯಿಂದ ಗಾಬರಿಗೊಂಡಿದ್ದೇನೆ. ವರದಿ ತಪ್ಪಾಗಿದೆ ಎಂದು ನಾನು ಭಾವಿಸುತ್ತೇನೆ. ಸುಪ್ರೀಂಕೋರ್ಟ್ ಕಾನೂನನ್ನು ಘೋಷಿಸಿದೆ: ಕಾನೂನು ಪ್ರಕ್ರಿಯೆಯಿಲ್ಲದೆ ಮನೆಗಳನ್ನು ಕೆಡವುದು ಕಾನೂನುಬಾಹಿರ ಮತ್ತು ಕುಟುಂಬದ ಇತರ ಸದಸ್ಯರ ಮೂಲಭೂತ ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದಿದ್ದಾರೆ.

ಉತ್ತರ ಪ್ರದೇಶದಲ್ಲಿ ಜಾರಿಯಲ್ಲಿರುವ ‘ಬುಲ್ಡೋಜರ್ ನ್ಯಾಯ’ ತಪ್ಪು, ಕಾನೂನುಬಾಹಿರ ಮತ್ತು ಅನ್ಯಾಯ ಎಂಬುದು ಕಾಂಗ್ರೆಸ್ ಪಕ್ಷದ ದೃಷ್ಟಿಕೋನವಾಗಿದೆ. ಕರ್ನಾಟಕದಂತಹ ಕಾಂಗ್ರೆಸ್ ಆಡಳಿತದ ರಾಜ್ಯವು ಉತ್ತರ ಪ್ರದೇಶದಂತೆ ಅಕ್ರಮ ಹಾದಿಯಲ್ಲಿ ಹೋಗದಿರಲಿ ಎಂದು ಅವರು ಪೋಸ್ಟ್ ಮಾಡಿದ್ದಾರೆ.

ಇದಕ್ಕೂ ಮುನ್ನಾ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಎಂಎಲ್‌ಸಿ ಕೆ ಅಬ್ದುಲ್ ಜಬ್ಬಾರ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಮಾದಕ ದ್ರವ್ಯ ವ್ಯಾಪಾರದಲ್ಲಿ ತೊಡಗಿರುವ ವಿದೇಶಿ ಪ್ರಜೆಗಳು ವಾಸಿಸುವ ಮನೆಗಳನ್ನು ಕೆಡವುದು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳುತ್ತಿದೆ ಎಂದು ಹೇಳಿಕೆ ನೀಡಿದ್ದರು.

error: Content is protected !!