ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಡುಗಡೆಗೂ ಮುನ್ನವೇ ಮಿಶ್ರ ನಿರೀಕ್ಷೆ ಎದುರಿಸಿದ್ದ ‘ಅಖಂಡ 2’ ಸಿನಿಮಾ ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ನೊಂದಿಗೆ ಗಮನ ಸೆಳೆದಿದೆ. ತೀವ್ರ ನಕಾರಾತ್ಮಕ ವಿಮರ್ಶೆಗಳು, ಸಾಮಾಜಿಕ ಜಾಲತಾಣಗಳ ಟ್ರೋಲ್‌ಗಳ ನಡುವೆಯೂ ಸಿನಿಮಾ ಗಳಿಸಿರುವ ಮೊತ್ತ ಚಿತ್ರೋದ್ಯಮದಲ್ಲಿ ಅಚ್ಚರಿ ಮೂಡಿಸಿದೆ.
ದರ್ಶನ್ ಅಭಿನಯದ ‘ಡೆವಿಲ್’ ಮೊದಲ ದಿನ 13 ಕೋಟಿ ರೂ. ಗಳಿಸಿದೆ ಎಂದು ಚಿತ್ರತಂಡ ಹೇಳಿಕೊಂಡಿದ್ದರೆ, ಅದಕ್ಕಿಂತಲೂ ದ್ವಿಗುಣದಷ್ಟು ಕಲೆಕ್ಷನ್ ‘ಅಖಂಡ 2’ ದಾಖಲಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರೀಮಿಯರ್ ಶೋಗಳು ಹಾಗೂ ಮೊದಲ ದಿನದ ಒಟ್ಟು ಗಳಿಕೆ ಸೇರಿಸಿದರೆ, ಸಿನಿಮಾ ಸುಮಾರು 30 ಕೋಟಿ ರೂ. ಗಳಿಸಿದೆ ಎಂದು ಅಂದಾಜಿಸಲಾಗಿದೆ. ಇದು ವಿಮರ್ಶಾತ್ಮಕವಾಗಿ ಸೋತ ಸಿನಿಮಾಗೆ ದೊಡ್ಡ ಓಪನಿಂಗ್ ಎನ್ನಲಾಗುತ್ತಿದೆ.
2021ರಲ್ಲಿ ಬಿಡುಗಡೆಯಾಗಿ ಹಿಟ್ ಆಗಿದ್ದ ‘ಅಖಂಡ’ ಚಿತ್ರದ ಮುಂದುವರಿದ ಭಾಗವೇ ಇದಾಗಿದ್ದು, ನಿರ್ದೇಶಕ ಬೋಯಪತಿ ಶ್ರೀನು ಹಾಗೂ ನಟ ಬಾಲಕೃಷ್ಣ ಅವರ ಕಾಂಬಿನೇಷನ್ ಮತ್ತೊಮ್ಮೆ ಅಖಾಡಕ್ಕಿಳಿದಿದೆ. ಆದರೆ ಈ ಬಾರಿ ಕಥೆ, ಲಾಜಿಕ್ ಹಾಗೂ ಅತಿರೇಕದ ಆ್ಯಕ್ಷನ್ ದೃಶ್ಯಗಳು ಟೀಕೆಗೆ ಗುರಿಯಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳು ವೈರಲ್ ಆಗಿದ್ದು, ವಿಮರ್ಶಕರು ಸರಾಸರಿ ರೇಟಿಂಗ್ ನೀಡಿದ್ದಾರೆ.
ಆದರೂ, ವಾರಾಂತ್ಯದಲ್ಲಿ ಸಿನಿಮಾ ಉತ್ತಮ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಆದರೆ ಸೋಮವಾರದಿಂದ ಪ್ರದರ್ಶನ ಹೇಗೆ ಇರುತ್ತದೆ ಎಂಬುದೇ ಚಿತ್ರದ ಭವಿಷ್ಯವನ್ನು ನಿರ್ಧರಿಸಲಿದೆ.

