ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಭಾರತ ಎರಡನೇ ಪಂದ್ಯದಲ್ಲಿ ಅನುಭವಿಸಿದ ಸೋಲು ತಂಡದ ತಂತ್ರಗಳ ಬಗ್ಗೆ ಮತ್ತೆ ಚರ್ಚೆಗೆ ಕಾರಣವಾಗಿದೆ. ಮೊದಲ ಪಂದ್ಯದಲ್ಲಿ ಗೆಲುವು ಕಂಡಿದ್ದ ಟೀಮ್ ಇಂಡಿಯಾ, ಎರಡನೇ ಟಿ20ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಯಿತು. ಇದರ ಬೆನ್ನಲ್ಲೇ, ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ತಂಡದ ಬ್ಯಾಟಿಂಗ್ ಕ್ರಮಾಂಕದ ಪ್ರಯೋಗಗಳನ್ನು ಕಟುವಾಗಿ ಟೀಕಿಸಿದ್ದಾರೆ.
ಎರಡನೇ ಟಿ20ನಲ್ಲಿ 214 ರನ್‌ಗಳ ದೊಡ್ಡ ಗುರಿ ಬೆನ್ನಟ್ಟಿದ ಭಾರತ ಕೇವಲ 162 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಇದ್ದಾಗಲೇ ಅಕ್ಷರ್ ಪಟೇಲ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಕಳಿಸಿದ್ದು ಅಚ್ಚರಿಯ ನಿರ್ಧಾರ ಎಂದು ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯವಾಗಿ ಟಾಪ್ ಆರ್ಡರ್ ಬ್ಯಾಟ್ಸ್‌ಮನ್ ಅಲ್ಲದ ಅಕ್ಷರ್, ಆ ಸ್ಥಾನದಲ್ಲಿ ನಿರೀಕ್ಷಿತ ವೇಗ ತೋರಲಿಲ್ಲ. ಅವರು 21 ಎಸೆತಗಳಲ್ಲಿ 21 ರನ್ ಮಾತ್ರ ಗಳಿಸಿದರು. ಬಳಿಕ ಬಂದ ಸೂರ್ಯಕುಮಾರ್ ಯಾದವ್ ಕೂಡ ಐದು ರನ್‌ಗಳಿಗೆ ಔಟಾದರು.
ದೊಡ್ಡ ಗುರಿ ಬೆನ್ನಟ್ಟುವ ಸಂದರ್ಭಗಳಲ್ಲಿ ಬಲಿಷ್ಠ ಬ್ಯಾಟ್ಸ್‌ಮನ್‌ಗಳು ಆರಂಭದಲ್ಲೇ ಕ್ರೀಸ್‌ಗೆ ಬರಬೇಕು ಎಂದು ಉತ್ತಪ್ಪ ಹೇಳಿದ್ದಾರೆ. ಪ್ರಯೋಗಗಳಿಗೆ ಸ್ಪಷ್ಟ ಕಾರಣ ಇರಬೇಕು, ಇಲ್ಲದಿದ್ದರೆ ಅದು ತಂಡದ ಲಯವನ್ನು ಕೆಡಿಸುತ್ತದೆ ಎಂಬುದು ಅವರ ಅಭಿಪ್ರಾಯ.
2026ರ ಟಿ20 ವಿಶ್ವಕಪ್ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ, ಇಂತಹ ತಂತ್ರದ ತಪ್ಪುಗಳನ್ನು ಮರುಕಳಿಸಬಾರದು ಎಂದು ಅವರು ಎಚ್ಚರಿಸಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸರಿಯಾದ ಸಮತೋಲನ ಕಂಡುಕೊಂಡು ಸರಣಿ ಗೆಲ್ಲುವತ್ತ ಗಮನ ಹರಿಸಬೇಕಾಗಿದೆ.

