Sunday, December 14, 2025

ರಾಜ್ಯಾದ್ಯಂತ ಕನ್ನಡ ನಾಮಫಲಕಕ್ಕೆ ಗಡುವು ನಿಗದಿ: ಸಚಿವ ತಂಗಡಗಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಸಾರ್ವಜನಿಕ ಹಾಗೂ ವಾಣಿಜ್ಯ ವಲಯಗಳಲ್ಲಿ ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಕಠಿಣ ನಿರ್ಧಾರಕ್ಕೆ ಬಂದಿದೆ. ಕರ್ನಾಟಕದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಆಸ್ಪತ್ರೆಗಳು, ಹೋಟೆಲ್‌ಗಳು, ಮನರಂಜನಾ ಕೇಂದ್ರಗಳು ಮತ್ತು ವಿವಿಧ ಟ್ರಸ್ಟ್‌ಗಳು ನಿಗದಿತ ಅವಧಿಯೊಳಗೆ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ನಡೆದ ಚರ್ಚೆಯ ವೇಳೆ ಸಚಿವರು ಮಾತನಾಡಿ, ಈ ಸಂಬಂಧ ಅಗತ್ಯ ನಿಯಮಾವಳಿಗಳನ್ನು ಈಗಾಗಲೇ ಕಾನೂನು ಮತ್ತು ಸಂಸದೀಯ ವ್ಯವಹಾರ ಇಲಾಖೆಗೆ ಅಂತಿಮ ಅನುಮೋದನೆಗಾಗಿ ರವಾನಿಸಲಾಗಿದೆ ಎಂದು ಹೇಳಿದರು.

ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ರಾಜ್ಯಾದ್ಯಂತ ಅಧಿಕೃತ ಆದೇಶ ಹೊರಡಿಸಲಾಗುತ್ತದೆ. ನಿಯಮ ಜಾರಿಯಾದ ಬಳಿಕ 15 ದಿನಗಳಿಂದ ಒಂದು ತಿಂಗಳೊಳಗೆ ಎಲ್ಲ ಸಂಸ್ಥೆಗಳು ನಾಮಫಲಕ ಅಳವಡಿಸಬೇಕು ಎಂಬ ನಿರೀಕ್ಷೆ ಸರ್ಕಾರ ಹೊಂದಿದೆ ಎಂದರು.

ಕನ್ನಡ ನಾಮಫಲಕ ಅಭಿಯಾನವು ಈಗಾಗಲೇ ಹಲವು ಜಿಲ್ಲೆಗಳಲ್ಲಿ ಯಶಸ್ಸು ಕಂಡಿದೆ. ಕೆಲವು ಜಿಲ್ಲೆಗಳು ಸಂಪೂರ್ಣ ಅನುಷ್ಠಾನ ಸಾಧಿಸಿದ್ದರೆ, ಉಳಿದ ಜಿಲ್ಲೆಗಳು ಕೂಡ ಹೆಚ್ಚಿನ ಪ್ರಗತಿ ದಾಖಲಿಸುತ್ತಿವೆ. ಎಲ್ಲಾ ಜಿಲ್ಲೆಗಳಲ್ಲಿ ಶೇ.100 ಅನುಷ್ಠಾನ ಸಾಧಿಸುವ ಗುರಿಯೊಂದಿಗೆ ಸರ್ಕಾರ ಮುಂದಾಗಿದೆ.

ನಿಯಮ ಪಾಲನೆಗೆ ನಿಗಾವಹಿಸಲು ರಾಜ್ಯಮಟ್ಟ ಹಾಗೂ ಜಿಲ್ಲಾಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಬೆಂಗಳೂರಿನಲ್ಲಿ ವಿಶೇಷ ತಪಾಸಣಾ ವ್ಯವಸ್ಥೆ ಜಾರಿಯಲ್ಲಿದ್ದು, ನಿಯಮ ಉಲ್ಲಂಘಿಸಿದ ಸಂಸ್ಥೆಗಳ ಮೇಲೆ ದಂಡಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ. ನಾಮಫಲಕಗಳಲ್ಲಿ ಕನ್ನಡಕ್ಕೆ ಶೇ.60ರಷ್ಟು ಪ್ರಾಮುಖ್ಯತೆ ನೀಡಲೇಬೇಕು ಎಂಬುದರಲ್ಲಿ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸಚಿವ ತಂಗಡಗಿ ಸ್ಪಷ್ಟಪಡಿಸಿದ್ದಾರೆ.

error: Content is protected !!