ಹೊಸದಿಗಂತ ಡಿಜಿಟಲ್ ಡೆಸ್ಕ್:
ನೆದರ್ಲೆಂಡ್ಸ್ ತಂಡದ ನಾಯಕ ಸ್ಕಾಟ್ ಎಡ್ವರ್ಡ್ಸ್ ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಗ್ರೇಡ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಬ್ಯಾಟಿಂಗ್ ಸುನಾಮಿ ಸೃಷ್ಟಿಸಿರುವ ಎಡ್ವರ್ಡ್ಸ್, ಭರ್ಜರಿ ದ್ವಿಶತಕ ಸಿಡಿಸುವ ಮೂಲಕ ಟಿ20 ಪಂದ್ಯವೊಂದರಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಗಳಿಸಿದ ವಿಶ್ವ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಆಲ್ಟೋನಾ ಸ್ಪೋರ್ಟ್ಸ್ ಪರ ವಿಲಿಯಮ್ಸ್ ಲ್ಯಾಂಡಿಂಗ್ ಎಸ್ಸಿ ತಂಡದ ವಿರುದ್ಧದ ಪಂದ್ಯದಲ್ಲಿ, ಆರಂಭಿಕರಾಗಿ ಕಣಕ್ಕಿಳಿದ ಎಡ್ವರ್ಡ್ಸ್ ಸಿಡಿಲಬ್ಬರದ ಬ್ಯಾಟಿಂಗ್ಗೆ ಸಾಕ್ಷಿಯಾದರು. ಶತಕ ಪೂರೈಸಿದ ಬಳಿಕ ಇನ್ನಷ್ಟು ಆಕ್ರಮಣಕಾರಿ ಆಟಕ್ಕೆ ಮುಂದಾದ ಅವರು ಕೇವಲ 81 ಎಸೆತಗಳಲ್ಲಿ ಅಜೇಯ 229 ರನ್ ಬಾರಿಸಿ ವಿಲಿಯಮ್ಸ್ ಲ್ಯಾಂಡಿಂಗ್ ಬೌಲರ್ಗಳಿಗೆ ನಿದ್ದೆಗೆಡಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 14 ಆಕರ್ಷಕ ಬೌಂಡರಿಗಳು ಮತ್ತು 23 ದೈತ್ಯ ಸಿಕ್ಸರ್‌ಗಳು ಸೇರಿದ್ದವು!
ಟಿ20 ಕ್ರಿಕೆಟ್ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲೆ ಈ ಮೊದಲು ಸಾಗರ್ ಕುಲ್ಕರ್ಣಿ ಅವರ ಹೆಸರಿನಲ್ಲಿತ್ತು. ಸಿಂಗಾಪುರ್ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಮರೀನಾ ಕ್ಲಬ್ ಪರ ಆಡಿದ್ದ ಸಾಗರ್ ಕುಲ್ಕರ್ಣಿ 56 ಎಸೆತಗಳಲ್ಲಿ 219 ರನ್ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಆದರೆ, ಈಗ ನೆದರ್ಲೆಂಡ್ಸ್ನ ಸ್ಟಾರ್ ಆಟಗಾರ ಸ್ಕಾಟ್ ಎಡ್ವರ್ಡ್ಸ್ ಕೇವಲ 10 ರನ್‌ಗಳ ಅಂತರದಲ್ಲಿ ಆ ದಾಖಲೆಯನ್ನು ಮುರಿದು ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.
ಎಡ್ವರ್ಡ್ಸ್ ಅವರ ಈ ಐತಿಹಾಸಿಕ ದ್ವಿಶತಕದ ನೆರವಿನಿಂದ ಆಲ್ಟೋನಾ ಸ್ಪೋರ್ಟ್ಸ್ ತಂಡವು ನಿಗದಿತ 20 ಓವರ್‌ಗಳಲ್ಲಿ ಬೃಹತ್ ಮೊತ್ತವಾದ 302 ರನ್‌ಗಳನ್ನು ಕಲೆಹಾಕಿತು. ಈ ಗುರಿ ಬೆನ್ನತ್ತಿದ ವಿಲಿಯಮ್ಸ್ ಲ್ಯಾಂಡಿಂಗ್ ಎಸ್ಸಿ ತಂಡವು ಕೇವಲ 118 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಆಲ್ಟೋನಾ ಸ್ಪೋರ್ಟ್ಸ್ ತಂಡವು 186 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

