ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಡುಗಡೆಯಾಗಿ ಎರಡು ವಾರಗಳನ್ನು ಪೂರೈಸಿರುವ ಧನುಷ್ ಮತ್ತು ಕೃತಿ ಸನೋನ್ ಅಭಿನಯದ ‘ತೇರೆ ಇಷ್ಕ್ ಮೇ’ ಬಾಕ್ಸ್ ಆಫೀಸ್‌ನಲ್ಲಿ ತನ್ನ ಹಿಡಿತ ಉಳಿಸಿಕೊಂಡಿದ್ದರು, ಗಳಿಕೆ ಮಾತ್ರ ಕಡಿಮಾಗುತ್ತಲೇ ಬಂದಿದೆ. ನವೆಂಬರ್ 28ರಂದು ಬಿಡುಗಡೆಯಾದ ಈ ಸಿನಿಮಾ ಪ್ರಾರಂಭದ ದಿನಗಳಿಂದಲೇ ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ನಿಧಾನವಾಗಿ ಗಳಿಕೆ ಕುಸಿಯುತ್ತಿದೆ. ಉತ್ತಮ ಓಪನಿಂಗ್ ಪಡೆದ ಈ ಚಿತ್ರ, ಧನುಷ್ ಅವರ ಬಾಲಿವುಡ್ ವೃತ್ತಿಜೀವನದಲ್ಲೇ ಅತಿದೊಡ್ಡ ಗಳಿಕೆಯ ಚಿತ್ರವಾಗಿ ಹೊರಹೊಮ್ಮಿದೆ.
ಆದರೆ ಎರಡನೇ ವಾರದಲ್ಲಿ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸೇರಿದಂತೆ ಹೊಸ ಬಿಡುಗಡೆಯ ಸಿನಿಮಾಗಳಿಂದ ತೀವ್ರ ಸ್ಪರ್ಧೆ ಎದುರಾಯಿತು. ಇದರ ಪರಿಣಾಮವಾಗಿ ಕಲೆಕ್ಷನ್‌ನಲ್ಲಿ ಸ್ವಲ್ಪ ಕುಸಿತ ಕಂಡರೂ, ಸಿನಿಮಾ ತನ್ನ ಓಟವನ್ನು ಸಂಪೂರ್ಣವಾಗಿ ನಿಲ್ಲಿಸಿಲ್ಲ. ಮೂರನೇ ವಾರಕ್ಕೆ ಕಾಲಿಟ್ಟಿರುವ ಚಿತ್ರವು 15ನೇ ದಿನದಂದು ಸುಮಾರು 1 ಕೋಟಿ ರೂ. ಸಂಗ್ರಹಿಸಿದ್ದು, ಭಾರತದಲ್ಲಿ ಇದುವರೆಗೆ ಒಟ್ಟು 109.80 ಕೋಟಿ ರೂ. ನಿವ್ವಳ ಕಲೆಕ್ಷನ್ ದಾಖಲಿಸಿದೆ.
ಗಮನಾರ್ಹವಾಗಿ, ‘ತೇರೆ ಇಷ್ಕ್ ಮೇ’ ಧನುಷ್ ಮತ್ತು ಸೋನಮ್ ಕಪೂರ್ ಅಭಿನಯದ ‘ರಾಂಝಾನಾ’ ಚಿತ್ರದ ಜೀವಮಾನದ ಗಳಿಕೆಯನ್ನು ಮೀರಿಸಿ ಹೊಸ ದಾಖಲೆ ಬರೆದಿದೆ. ಶಂಕರ್ ಮತ್ತು ಮುಕ್ತಿಯ ಪ್ರೇಮಕಥೆಯ ಮೂಲಕ ಸಮಯ, ವಿಧಿ ಮತ್ತು ಲಾಜಿಕ್ ಅನ್ನು ಪ್ರಶ್ನಿಸುವ ಈ ಸಿನಿಮಾ ಪ್ರೇಕ್ಷಕರ ಮನಸ್ಸಿನಲ್ಲಿ ತನ್ನದೇ ಆದ ಗುರುತು ಮೂಡಿಸಿದೆ. ಎ.ಆರ್. ರೆಹಮಾನ್ ಸಂಗೀತ, ಆನಂದ್ ಎಲ್ ರೈ ಅವರ ನಿರ್ದೇಶನ ಮತ್ತು ಧನುಷ್ ಅವರ ತೀವ್ರ ಅಭಿನಯವೇ ಈ ಚಿತ್ರದ ಬಲವಾಗಿ ಉಳಿಯಲು ಕಾರಣ ಎನ್ನಲಾಗಿದೆ.

