ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ದರ್ಗಾ ಸಮೀಪದ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ ಆಚರಣೆಗೆ ಅನುಮತಿ ನೀಡಿದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಮಹಾಭಿಯೋಗಕ್ಕೆ ಸಹಿ ಸಂಗ್ರಹಿಸಿದ ಕಾಂಗ್ರೆಸ್ ಸಂಸದರ ನಡೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ತಮಗೆ ಬೇಕಾದ ತೀರ್ಪು ಬಾರದಿದ್ದಾಗ ನ್ಯಾಯಾಂಗದ ವಿರುದ್ಧ ಟೀಕೆ ಮಾಡುವುದು ಮತ್ತು ನ್ಯಾಯಮೂರ್ತಿಗಳ ವಾಗ್ದಂಡನೆಗೆ ಯತ್ನಿಸುವುದು ಕಾಂಗ್ರೆಸ್ ಪಕ್ಷದ ಅಸಹ್ಯಕರ ವರ್ತನೆ ಎಂದು ಖಂಡಿಸಿದ್ದಾರೆ.
ತಿರುಪರಾನುಕುಂದ್ರಂ ಬೆಟ್ಟದ ಮೇಲಿನ ದರ್ಗಾ ಸಮೀಪದ ಸ್ಥಳದಲ್ಲಿ ಕಾರ್ತಿಕ ದೀಪ ಹಚ್ಚಲು ಅನುಮತಿ ನೀಡಿ ತೀರ್ಪು ನೀಡಿದ್ದ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಒಟ್ಟು 103 ಸಂಸದರು ಮಹಾಭಿಯೋಗಕ್ಕೆ ಸಹಿ ಸಂಗ್ರಹಿಸಿದ್ದಾರೆ. ಈ ಸಹಿ ಸಂಗ್ರಹ ಅಭಿಯಾನದಲ್ಲಿ ಕರ್ನಾಟಕದ ಮೂವರು ಸಂಸದರಾದ ಶ್ರೇಯಸ್ ಪಟೇಲ್, ಕುಮಾರ್ ನಾಯಕ್ ಮತ್ತು ಡಾ. ಪ್ರಭಾ ಮಲ್ಲಿಕಾರ್ಜುನ್ ಅವರೂ ಭಾಗಿಯಾಗಿರುವುದು ಗಮನಾರ್ಹ.
ಈ ಘಟನೆಯನ್ನು “ನ್ಯಾಯಾಧೀಶರು ತಮಗೆ ಬೇಕಾದಂತೆ ತೀರ್ಪು ನೀಡಬೇಕು ಎಂಬ ಒತ್ತಡದ ತಂತ್ರ” ಎಂದು ಜೋಶಿ ಬಣ್ಣಿಸಿದ್ದಾರೆ. ಪ್ರಜಾಪ್ರಭುತ್ವದ ರಕ್ಷಣೆಗಾಗಿ ವಿರೋಧ ಪಕ್ಷಗಳ ಈ ‘ಹಿಂದೂ ವಿರೋಧಿ’ ಮತ್ತು ‘ಸಂವಿಧಾನ ವಿರೋಧಿ’ ಮನಸ್ಥಿತಿಯನ್ನು ಜನಸಾಮಾನ್ಯರು ಗಂಭೀರವಾಗಿ ಪರಿಗಣಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕರೆ ನೀಡಿದ್ದಾರೆ.

