Monday, December 15, 2025

ಕ್ರಿಸ್ಮಸ್ ಹಬ್ಬದ ಸಂಭ್ರಮಕ್ಕೆ ವಿಶೇಷ ರೈಲು ಸೇವೆ: ಕೆಲ ಮಾರ್ಗಗಳಲ್ಲಿ ಸಂಚಾರ ಬದಲಾವಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹಬ್ಬದ ಹಿನ್ನೆಲೆ ಪ್ರಯಾಣಿಕರ ಹೆಚ್ಚುವರಿ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಸೌತ್ ವೆಸ್ಟರ್ನ್ ರೈಲ್ವೇ ವಿಶೇಷ ವ್ಯವಸ್ಥೆಗಳನ್ನು ಘೋಷಿಸಿದೆ. ಹಬ್ಬದ ದಿನಗಳಲ್ಲಿ ಹೆಚ್ಚಾಗುವ ಪ್ರಯಾಣದ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಡಿಸೆಂಬರ್ 24ರಂದು ಹುಬ್ಬಳ್ಳಿ–ಯಶವಂತಪುರ–ವಿಜಯಪುರ ಮಾರ್ಗದಲ್ಲಿ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ.

ರೈಲು ಸಂಖ್ಯೆ 07379 ಡಿಸೆಂಬರ್ 24ರಂದು ಮಧ್ಯಾಹ್ನ 12ಕ್ಕೆ ಹುಬ್ಬಳ್ಳಿಯಿಂದ ಹೊರಟು ಹಾವೇರಿ, ಹರಿಹರ, ದಾವಣಗೆರೆ, ಅರಸೀಕೆರೆ ಮತ್ತು ತುಮಕೂರು ಮೂಲಕ ರಾತ್ರಿ 8.30ಕ್ಕೆ ಯಶವಂತಪುರ ತಲುಪಲಿದೆ. ಇದೇ ದಿನ ಯಶವಂತಪುರದಿಂದ ರೈಲು ಸಂಖ್ಯೆ 06277 ರಾತ್ರಿ 9.50ಕ್ಕೆ ಪ್ರಯಾಣ ಆರಂಭಿಸಿ ತುಮಕೂರು, ಅರಸೀಕೆರೆ, ದಾವಣಗೆರೆ, ಹರಿಹರ, ಬಾದಾಮಿ, ಬಾಗಲಕೋಟೆ ಹಾಗೂ ಆಲಮಟ್ಟಿ ಮಾರ್ಗವಾಗಿ ಬೆಳಿಗ್ಗೆ 9ಕ್ಕೆ ವಿಜಯಪುರ ತಲುಪಲಿದೆ. ಈ ವಿಶೇಷ ಸೇವೆ ಉತ್ತರ ಕರ್ನಾಟಕ ಹಾಗೂ ಬೆಂಗಳೂರಿನ ನಡುವೆ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ.

ಇದಕ್ಕು ಜೊತೆಗೂಡಿ ತುಮಕೂರು–ಮಲ್ಲಸಂದ್ರ ವಿಭಾಗದಲ್ಲಿ ಅಗತ್ಯ ಎಂಜಿನಿಯರಿಂಗ್ ಕಾಮಗಾರಿಗಳ ಹಿನ್ನೆಲೆಯಲ್ಲಿ ಕೆಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ಕೆಲ MEMU ಹಾಗೂ ಎಕ್ಸ್‌ಪ್ರೆಸ್ ರೈಲುಗಳು ನಿಗದಿತ ಗಮ್ಯಸ್ಥಾನ ತಲುಪದೇ ಮಧ್ಯದಲ್ಲೇ ಅಂತ್ಯಗೊಳ್ಳಲಿದ್ದು, ಕೆಲವು ರೈಲುಗಳು ಬದಲಿ ನಿಲ್ದಾಣಗಳಿಂದ ಪ್ರಯಾಣ ಆರಂಭಿಸಲಿವೆ. ಇನ್ನೂ ಕೆಲವು ಆಯ್ದ ರೈಲುಗಳ ಸಂಚಾರವನ್ನು ಡಿಸೆಂಬರ್ 17 ಮತ್ತು 24ರಂದು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.

ಪ್ರಯಾಣಿಕರು ಪ್ರಯಾಣಕ್ಕೂ ಮುನ್ನ ರೈಲುಗಳ ಸಮಯ ಹಾಗೂ ಮಾರ್ಗಗಳ ಬಗ್ಗೆ ಅಧಿಕೃತ ಮಾಹಿತಿ ಪಡೆದು ಯೋಜನೆ ರೂಪಿಸಿಕೊಳ್ಳುವಂತೆ ರೈಲ್ವೇ ಇಲಾಖೆ ಮನವಿ ಮಾಡಿದೆ.

error: Content is protected !!