ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಮಟ್ಟದಲ್ಲಿ ಮಹಿಳಾ ನಾಯಕತ್ವದ ಪ್ರಭಾವವನ್ನು ಅಳೆಯುವ ಫೋರ್ಬ್ಸ್ ಮ್ಯಾಗಜಿನ್ ತನ್ನ 2025ರ ಪ್ರಭಾವಿ ಸ್ತ್ರೀಯರ ಪಟ್ಟಿಯನ್ನು ಪ್ರಕಟಿಸಿದ್ದು, ಈ ಪಟ್ಟಿಯಲ್ಲಿ ಭಾರತೀಯ ಮಹಿಳೆಯರ ಸಾಧನೆ ವಿಶೇಷ ಗಮನ ಸೆಳೆದಿದೆ. ದೇಶದ ಪರವಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಗ್ರಸ್ಥಾನ ಪಡೆದುಕೊಂಡಿದ್ದು, ಜಾಗತಿಕ ಪಟ್ಟಿಯಲ್ಲಿ 24ನೇ ಸ್ಥಾನ ಗಳಿಸಿದ್ದಾರೆ.
ಆರ್ಥಿಕ ನೀತಿ ರೂಪಿಸುವುದು, ರಾಷ್ಟ್ರೀಯ ಹಣಕಾಸು ವ್ಯವಸ್ಥೆಯನ್ನು ಸ್ಥಿರವಾಗಿ ಮುನ್ನಡೆಸುವುದು ಸೇರಿದಂತೆ ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿರುವ ನಿರ್ಮಲಾ ಸೀತಾರಾಮನ್ ಅವರ ನಾಯಕತ್ವವನ್ನು ಫೋರ್ಬ್ಸ್ ಗುರುತಿಸಿದೆ. ಅವರು ಸತತ ಎಂಟನೇ ಬಾರಿ ಕೇಂದ್ರ ಬಜೆಟ್ ಮಂಡಿಸಿರುವ ಅಪರೂಪದ ಸಾಧನೆ ಮಾಡಿದ್ದಾರೆ.
ಈ ಪಟ್ಟಿಯಲ್ಲಿ ಕೈಗಾರಿಕಾ ಕ್ಷೇತ್ರದ ನಾಯಕಿಯರೂ ಸ್ಥಾನ ಪಡೆದಿದ್ದಾರೆ. ಎಚ್‌ಸಿಎಲ್ ಸಂಸ್ಥೆಯ ಸಿಇಒ ರೋಶನಿ ನಾಡಾರ್ 76ನೇ ಸ್ಥಾನದಲ್ಲಿದ್ದರೆ, ಬಯೋಕಾನ್ ಸಂಸ್ಥೆಯ ಸ್ಥಾಪಕಿ ಹಾಗೂ ಕಾರ್ಯನಿರ್ವಾಹಕ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ 83ನೇ ಸ್ಥಾನವನ್ನು ಪಡೆದಿದ್ದಾರೆ. ಇಬ್ಬರೂ ತಮ್ಮ ಸ್ವಂತ ಸಾಮರ್ಥ್ಯ ಮತ್ತು ದೃಢ ನಿರ್ಧಾರದಿಂದ ಉದ್ಯಮ ಸಾಮ್ರಾಜ್ಯ ನಿರ್ಮಿಸಿದ ಮಹಿಳೆಯರೆಂದು ಫೋರ್ಬ್ಸ್ ಉಲ್ಲೇಖಿಸಿದೆ.
ಜಾಗತಿಕ ಮಟ್ಟದಲ್ಲಿ ಯುರೋಪಿಯನ್ ಕಮಿಷನ್‌ನ ಮೊದಲ ಮಹಿಳಾ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇನ್ ಮೊದಲ ಸ್ಥಾನ ಪಡೆದಿದ್ದಾರೆ. ಈ ಪಟ್ಟಿ ರಾಜಕೀಯ, ಉದ್ಯಮ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಭಾವ ದಿನೇದಿನೇ ವಿಸ್ತರಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ.

