Tuesday, December 16, 2025

ದಕ್ಷಿಣ ಆಫ್ರಿಕಾಕ್ಕೆ ಬರಸಿಡಿಲು: ನಿರ್ಮಾಣ ಹಂತದ 4 ಅಂತಸ್ತಿನ ದೇವಾಲಯ ಪತನ, ಭಕ್ತರ ಕನಸು ಭಗ್ನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಆಫ್ರಿಕಾದ ಕ್ವಾಜುಲು-ನಟಾಲ್ ಪ್ರಾಂತ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಅಂತಸ್ತಿನ ಹಿಂದೂ ದೇವಾಲಯದ ಒಂದು ಭಾಗ ಕುಸಿದು ಬಿದ್ದು ಭಾರಿ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ಭಾರತೀಯ ಮೂಲದ 52 ವರ್ಷದ ವ್ಯಕ್ತಿ ಸೇರಿದಂತೆ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಇಥೆಕ್ವಿನಿಯ ಉತ್ತರಕ್ಕಿರುವ ರೆಡ್‌ಕ್ಲಿಫ್‌ನಲ್ಲಿನ ಕಡಿದಾದ ಬೆಟ್ಟದ ಮೇಲೆ ‘ನ್ಯೂ ಅಹೋಬಿಲಂ ಟೆಂಪಲ್ ಆಫ್ ಪ್ರೊಟೆಕ್ಷನ್’ ದೇವಾಲಯದ ಕಾಮಗಾರಿ ನಡೆಯುತ್ತಿತ್ತು. ಶುಕ್ರವಾರ (ಡಿಸೆಂಬರ್ 12) ಕಟ್ಟಡದ ಭಾಗವೊಂದು ಕುಸಿದು ಬಿದ್ದಿದ್ದು, ಹಲವಾರು ಕಾರ್ಮಿಕರು ಮತ್ತು ಭಕ್ತರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ.

ಶುಕ್ರವಾರದಂದು ಇಬ್ಬರು ಕಾರ್ಮಿಕರು ಹಾಗೂ ಒಬ್ಬ ಭಕ್ತ ಸಾವನ್ನಪ್ಪಿದ್ದು, ಶನಿವಾರ (ಡಿಸೆಂಬರ್ 13) ರಕ್ಷಣಾ ತಂಡಗಳು ಮತ್ತೊಬ್ಬರ ಶವವನ್ನು ಹೊರತೆಗೆದಿವೆ. ಇದರಿಂದ ಸಾವಿನ ಸಂಖ್ಯೆ 4ಕ್ಕೆ ಏರಿದೆ. ಮೃತರ ಪೈಕಿ ದೇವಾಲಯ ಟ್ರಸ್ಟ್‌ನ ಕಾರ್ಯಕಾರಿ ಸದಸ್ಯ ಮತ್ತು ನಿರ್ಮಾಣ ಯೋಜನೆಯ ವ್ಯವಸ್ಥಾಪಕ ವಿಕಿ ಜೈರಾಜ್ ಪಾಂಡೆ (52) ಎಂದು ಗುರುತಿಸಲಾಗಿದೆ. ಪಾಂಡೆ ಅವರು ಸುಮಾರು ಎರಡು ವರ್ಷಗಳಿಂದ ಈ ದೇವಾಲಯದ ಅಭಿವೃದ್ಧಿ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ. ದತ್ತಿ ಸಂಸ್ಥೆ ‘ಫುಡ್ ಫಾರ್ ಲವ್’ ನ ನಿರ್ದೇಶಕ ಸನ್ವೀರ್ ಮಹಾರಾಜ್ ಕೂಡ ಅವರ ಸಾವನ್ನು ದೃಢಪಡಿಸಿದ್ದಾರೆ.

ಭಾರೀ ಮಳೆ ಮತ್ತು ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಶನಿವಾರ ಮಧ್ಯಾಹ್ನ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಅವಶೇಷಗಳ ಅಡಿಯಲ್ಲಿ ಇನ್ನೂ ಎಷ್ಟು ಜನರು ಸಿಲುಕಿದ್ದಾರೆ ಎಂಬ ನಿಖರ ಮಾಹಿತಿ ಲಭ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಹೆಯನ್ನು ಹೋಲುವಂತೆ ವಿನ್ಯಾಸಗೊಳಿಸಲಾಗಿರುವ ಈ ದೇವಾಲಯದಲ್ಲಿ, ಭಗವಾನ್ ನರಸಿಂಹದೇವನ ವಿಶ್ವದ ಅತಿದೊಡ್ಡ ವಿಗ್ರಹವನ್ನು ಪ್ರತಿಷ್ಠಾಪಿಸುವ ಮಹತ್ವಾಕಾಂಕ್ಷೆಯನ್ನು ನಿರ್ಮಾಣದ ಹೊಣೆ ಹೊತ್ತವರು ಹೊಂದಿದ್ದರು.

error: Content is protected !!