ಬೆಳಿಗ್ಗೆ ಎದ್ದ ತಕ್ಷಣ ಸೀನುತ್ತೀರಾ? ಧೂಳು, ಚಳಿ ಅಥವಾ ಅಲರ್ಜಿ ಇಲ್ಲದಿದ್ದರೂ ಸೀನು ಬರುವುದು ಅಚ್ಚರಿಯಂತೆ ಅನಿಸಬಹುದು. ಆದರೆ ವೈದ್ಯಕೀಯವಾಗಿ ನೋಡಿದರೆ, ಸೀನುವಿಕೆ ಅಸಹಜ ಕ್ರಿಯೆಯಲ್ಲ. ಇದು ದೇಹವು ತನ್ನ ಉಸಿರಾಟ ವ್ಯವಸ್ಥೆಯನ್ನು ತಕ್ಷಣವೇ ಶುದ್ಧಗೊಳಿಸಲು ಬಳಸುವ ಅತ್ಯಂತ ಪರಿಣಾಮಕಾರಿ ರಕ್ಷಣಾತ್ಮಕ ಪ್ರತಿಕ್ರಿಯೆ. ಅಂದರೆ, ಸೀನು ನಮ್ಮ ಆರೋಗ್ಯದ “ಅಲಾರಂ ಸಿಸ್ಟಮ್” ಆಗಿದೆ.
ಸೀನುವಿಕೆ ಹೇಗೆ ಶುರುವಾಗುತ್ತದೆ?:
ಮೂಗಿನೊಳಗೆ ಧೂಳು, ಪರಾಗಕಣ, ಸಾಕುಪ್ರಾಣಿಗಳ ಕೂದಲು ಅಥವಾ ಸೂಕ್ಷ್ಮ ಬ್ಯಾಕ್ಟೀರಿಯಾ ಪ್ರವೇಶಿಸಿದ ಕ್ಷಣವೇ ದೇಹದ ಪ್ರತಿರೋಧ ವ್ಯವಸ್ಥೆ ಎಚ್ಚೆತ್ತುಕೊಳ್ಳುತ್ತದೆ. ಹಿಸ್ಟಮೈನ್ ಎಂಬ ರಾಸಾಯನಿಕ ಬಿಡುಗಡೆಯಾಗಿ ಮೂಗಿನ ಒಳಪದರವನ್ನು ಕೆರಳಿಸುತ್ತದೆ. ಈ ಕೆರಳಿಕೆಯ ಪ್ರತಿಫಲವೇ ಬಲವಾದ ಸೀನು. ಸೀನುವಾಗ ಗಾಳಿಯು ಅತಿ ವೇಗದಲ್ಲಿ ಹೊರಬಂದು ಆ ಹಾನಿಕಾರಕ ಕಣಗಳನ್ನು ಲೋಳೆಯೊಂದಿಗೆ ಹೊರಗೆ ತಳ್ಳುತ್ತದೆ.
ಸೀನನ್ನು ತಡೆದರೆ ಏನಾಗಬಹುದು?:
ಸೀನುವಾಗ ಗಾಳಿಯ ವೇಗ ಗಂಟೆಗೆ 100 ಮೈಲುಗಳಿಗಿಂತ ಹೆಚ್ಚಿರಬಹುದು. ಇದನ್ನು ಬಲವಂತವಾಗಿ ತಡೆಯಲು ಪ್ರಯತ್ನಿಸಿದರೆ ಕಿವಿ, ಗಂಟಲು ಅಥವಾ ಕಣ್ಣುಗಳ ಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಅಪರೂಪದಲ್ಲಿ ಒಳಗಾಯಗಳ ಅಪಾಯವೂ ಇರಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ.
ಸೂರ್ಯನ ಬೆಳಕು ನೋಡಿದರೆ ಸೀನು ಬರುವುದೇಕೆ?:
ಕೆಲವರಿಗೆ ಪ್ರಕಾಶಮಾನ ಬೆಳಕು ಕಂಡ ತಕ್ಷಣ ಸೀನು ಬರುತ್ತದೆ. ಇದು ಅಪರೂಪದ ಅನುವಂಶಿಕ ಲಕ್ಷಣ. ಕಣ್ಣು ಮತ್ತು ಮೂಗಿನ ನರಗಳು ಮೆದುಳಿನಲ್ಲಿ ಹತ್ತಿರದಲ್ಲಿರುವುದೇ ಇದಕ್ಕೆ ಕಾರಣ. ಪ್ರಕಾಶಮಾನವಾದ ಬೆಳಕು ಕಣ್ಣುಗಳಲ್ಲಿನ ನರಗಳನ್ನು ಉತ್ತೇಜಿಸಿದಾಗ, ಪ್ರಚೋದನೆಯು ಮೂಗಿನಲ್ಲಿರುವ ನರಗಳಿಗೆ ಪ್ರಯಾಣಿಸಿ ಸೀನು ಉಂಟಾಗುತ್ತದೆ.

