Tuesday, December 16, 2025

ಮಿಂಚಿನ ಹುಡುಗನ ಸಿಡಿಲಾರ್ಭಟ! ಒಂದೇ ವರ್ಷದಲ್ಲಿ 50+ ಸಿಕ್ಸ್ ಸಿಡಿಸಿದ ವಿಶ್ವದ ಅತ್ಯಂತ ಕಿರಿಯ ಬ್ಯಾಟರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ಕ್ರಿಕೆಟ್ ಅಂಗಳದಲ್ಲಿ ಟೀಮ್ ಇಂಡಿಯಾದ ಯುವ ಆಟಗಾರ ಅಭಿಷೇಕ್ ಶರ್ಮಾ ಅವರ ಅಬ್ಬರ ಮುಂದುವರಿದಿದೆ. ಅವರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಈ ವರ್ಷ ಅವರು ನೂರಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿ ಹೊಸ ಮೈಲಿಗಲ್ಲನ್ನು ತಲುಪಿದ್ದಾರೆ. ಇದರಲ್ಲಿ ಗಮನಾರ್ಹವಾಗಿ, 50ಕ್ಕೂ ಹೆಚ್ಚು ಸಿಕ್ಸರ್‌ಗಳು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮೂಡಿಬಂದಿವೆ ಎಂಬುದು ವಿಶೇಷ.

ದಕ್ಷಿಣ ಆಫ್ರಿಕಾ ವಿರುದ್ಧದ ಇತ್ತೀಚಿನ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಅಭಿಷೇಕ್ ಶರ್ಮಾ ಅವರು ಒಟ್ಟು 6 ಸಿಕ್ಸರ್‌ಗಳನ್ನು ಬಾರಿಸಿದರು. ಈ ಆರು ಸಿಕ್ಸರ್‌ಗಳೊಂದಿಗೆ, ಈ ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವರು ತಮ್ಮ 50ನೇ ಸಿಕ್ಸರ್ ಮೈಲಿಗಲ್ಲನ್ನು ಪೂರೈಸಿದರು.

ಈ ಸಾಧನೆಯು ಅಭಿಷೇಕ್ ಶರ್ಮಾ ಅವರಿಗೆ ಒಂದು ವಿಶ್ವ ದಾಖಲೆಯನ್ನು ತಂದುಕೊಟ್ಟಿದೆ. ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಸಿಕ್ಸರ್‌ಗಳ ಅರ್ಧಶತಕ ಪೂರೈಸಿದ ವಿಶ್ವದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. 25 ವರ್ಷದ ಅಭಿಷೇಕ್ ಈ ವರ್ಷ ಕೇವಲ 20 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 53 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಇದಕ್ಕೂ ಮುನ್ನ ಈ ವಿಶ್ವ ದಾಖಲೆಯು ಆಸ್ಟ್ರೇಲಿಯಾದ ಕರನ್​ಬೀರ್ ಸಿಂಗ್ ಅವರ ಹೆಸರಿನಲ್ಲಿತ್ತು. 30 ವರ್ಷ ವಯಸ್ಸಿನ ಕರನ್‌ಬೀರ್ ಸಿಂಗ್ ಅವರು 2025 ರಲ್ಲಿ 32 ಪಂದ್ಯಗಳನ್ನಾಡಿ 50ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ಕೇವಲ 25 ವರ್ಷದ ಅಭಿಷೇಕ್ ಶರ್ಮಾ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಈ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ.

ಇದಲ್ಲದೆ, ಒಂದೇ ವರ್ಷದಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಭಾರತದ 2ನೇ ಬ್ಯಾಟರ್ ಎಂಬ ಕೀರ್ತಿಗೂ ಅಭಿಷೇಕ್ ಶರ್ಮಾ ಭಾಜನರಾಗಿದ್ದಾರೆ. ಈ ಹಿಂದೆ, 2022ರಲ್ಲಿ ಟೀಮ್ ಇಂಡಿಯಾದ ಸೂರ್ಯಕುಮಾರ್ ಯಾದವ್ ಅವರು 68 ಸಿಕ್ಸರ್‌ಗಳನ್ನು ಬಾರಿಸಿ ಈ ಸಾಧನೆ ಮಾಡಿದ್ದರು. ಇದೀಗ ಅಭಿಷೇಕ್ ಶರ್ಮಾ 53 ಸಿಕ್ಸರ್‌ಗಳೊಂದಿಗೆ ಆ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

error: Content is protected !!