Tuesday, December 16, 2025

CINE | ದ್ವಿಪಾತ್ರದಲ್ಲಿ ‘ಡೆವಿಲ್’ ಮೋಡಿ: ಸಿಂಗಲ್ ಸ್ಕ್ರೀನ್‌ಗಳಲ್ಲಿ ಹೌಸ್‌ಫುಲ್, ವಾರಾಂತ್ಯದ ಗಳಿಕೆ ಎಷ್ಟು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಡೆವಿಲ್’ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಗೊಂಡಿದ್ದು, ಮೊದಲ ವಾರಾಂತ್ಯದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಪ್ರಕಾಶ್ ವೀರ್ ನಿರ್ದೇಶನದ ಈ ಚಿತ್ರಕ್ಕೆ ಅಭಿಮಾನಿಗಳು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಾಲ್ಕು ದಿನಗಳಲ್ಲಿ ಸಿನಿಮಾದ ಒಟ್ಟು ಗಳಿಕೆ 24 ಕೋಟಿ ರೂಪಾಯಿಗಳನ್ನು ದಾಟಿದೆ ಎಂದು ವರದಿಯಾಗಿದೆ.

‘ಡೆವಿಲ್’ ಚಿತ್ರವು ತೆರೆಕಂಡ ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ 13 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಪ್ರಬಲ ಶುಭಾರಂಭ ಮಾಡಿದೆ. ಈ ಸಂಗತಿಯನ್ನು ಚಿತ್ರತಂಡವೇ ಅಧಿಕೃತವಾಗಿ ಪ್ರಕಟಿಸಿತ್ತು. ನಂತರದ ದಿನಗಳಲ್ಲಿ ಗಳಿಕೆಯಲ್ಲಿ ತುಸು ಇಳಿಮುಖವಾದರೂ, ವಾರಾಂತ್ಯದಲ್ಲಿ ಮತ್ತೆ ಚೇತರಿಕೆ ಕಂಡಿದೆ.

ಶುಕ್ರವಾರ (ಡಿಸೆಂಬರ್ 12): 3.4 ಕೋಟಿ ರೂ.

ಶನಿವಾರ (ಡಿಸೆಂಬರ್ 13): 3.80 ಕೋಟಿ ರೂ.

ಭಾನುವಾರ (ಡಿಸೆಂಬರ್ 14): 4-5 ಕೋಟಿ ರೂ. (ಅಂದಾಜು)

Sacnilk ವರದಿಯ ಪ್ರಕಾರ, ಮೊದಲ ವಾರಾಂತ್ಯದಲ್ಲಿ ಸಿನಿಮಾ ಉತ್ತಮ ಗಳಿಕೆಯನ್ನು ದಾಖಲಿಸಿದೆ. ಭಾನುವಾರದಂದು 4 ರಿಂದ 5 ಕೋಟಿ ರೂಪಾಯಿಗಳಷ್ಟು ಕಲೆಕ್ಷನ್ ಆಗಿದ್ದು, ದರ್ಶನ್ ಅವರ ಸ್ಟಾರ್ ವ್ಯಾಲ್ಯೂ ಮತ್ತು ಚಿತ್ರದ ಕುರಿತಾದ ಸಕಾರಾತ್ಮಕ ಚರ್ಚೆಗಳು ಇದಕ್ಕೆ ಕಾರಣವಾಗಿವೆ.

ನಿರ್ದೇಶಕ ಪ್ರಕಾಶ್ ವೀರ್ ಅವರು ‘ಡೆವಿಲ್’ ಚಿತ್ರದಲ್ಲಿ ದರ್ಶನ್ ಅವರನ್ನು ದ್ವಿಪಾತ್ರದಲ್ಲಿ ಪ್ರಸ್ತುತಪಡಿಸಿದ್ದಾರೆ. ಒಂದು ಪಾತ್ರ ಸಕಾರಾತ್ಮಕವಾಗಿದ್ದರೆ, ಮತ್ತೊಂದು ಪಾತ್ರ ನಕಾರಾತ್ಮಕ ಛಾಯೆಯನ್ನು ಹೊಂದಿದೆ. ಒಂದೇ ಸಿನಿಮಾದಲ್ಲಿ ದರ್ಶನ್ ಅವರನ್ನು ಹೀರೋ ಮತ್ತು ವಿಲನ್ ಆಗಿ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿರುವುದು ಅವರ ಖುಷಿಯನ್ನು ಹೆಚ್ಚಿಸಿದೆ. ಈ ಕಾರಣಕ್ಕಾಗಿಯೇ ಹಲವು ಅಭಿಮಾನಿಗಳು ಚಿತ್ರವನ್ನು ಪದೇ ಪದೇ ವೀಕ್ಷಿಸುತ್ತಿದ್ದಾರೆ ಎನ್ನಲಾಗಿದೆ. ಜೊತೆಗೆ ಗಿಲ್ಲಿ ಅವರ ಪಾತ್ರವೂ ಸಿನಿಮಾಗೆ ಮತ್ತಷ್ಟು ಬಲ ತುಂಬಿದೆ.

ಡಿಸೆಂಬರ್ 15, ಸೋಮವಾರದಿಂದ ಚಿತ್ರಕ್ಕೆ ನಿಜವಾದ ಸವಾಲು ಶುರುವಾಗಲಿದೆ. ವಾರದ ದಿನಗಳಲ್ಲಿ, ಅದರಲ್ಲೂ ಮಲ್ಟಿಪ್ಲೆಕ್ಸ್‌ಗಳಿಗಿಂತ ಹೆಚ್ಚಾಗಿ ಸಿಂಗಲ್ ಸ್ಕ್ರೀನ್‌ಗಳಲ್ಲಿ ‘ಡೆವಿಲ್’ ಸಿನಿಮಾ ತನ್ನ ಪ್ರದರ್ಶನವನ್ನು ಮುಂದುವರೆಸಿದ್ದು, ಕೇವಲ ಬೆಂಗಳೂರು ಮಾತ್ರವಲ್ಲದೆ ಸಣ್ಣ ಪಟ್ಟಣಗಳಲ್ಲಿಯೂ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಇಂದಿನಿಂದ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಹೇಗಿರುತ್ತದೆ ಎಂಬುದರ ಮೇಲೆ ‘ಡೆವಿಲ್’ ಚಿತ್ರದ ಅಂತಿಮ ಯಶಸ್ಸು ನಿಂತಿದೆ.

ಮುಂದಿನ ಓಟ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

error: Content is protected !!