ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿರುತೆರೆ ಮತ್ತು ರಂಗಭೂಮಿ ಲೋಕದಲ್ಲಿ ತಮ್ಮ ವಿಶಿಷ್ಟ ಅಭಿನಯದಿಂದ ಮೋಡಿ ಮಾಡಿದ್ದ ನಟಿ ಗೀತಾ ಭಾರತಿ ಭಟ್ ಅವರು ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ‘ಬ್ರಹ್ಮಗಂಟು’ ಧಾರಾವಾಹಿಯ ಮೂಲಕ ಮನೆಮಾತಾದ ಈ ಬಹುಮುಖ ಪ್ರತಿಭೆ, ಬ್ರಹ್ಮಾವರದ ರಾಜಾರಾಮ್ ಭಟ್ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.

ಕನ್ನಡ ಕಿರುತೆರೆಯ ಜನಪ್ರಿಯ ಕಲಾವಿದೆ, ಗಾಯಕಿ ಹಾಗೂ ರಂಗಭೂಮಿ ಕಲಾವಿದೆಯೂ ಆಗಿರುವ ಗೀತಾ ಭಾರತಿ ಭಟ್ ಅವರು ಬಿಗ್‌ಬಾಸ್ ಸೀಸನ್ 8 ರ ಸ್ಪರ್ಧಿಯಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಅನೇಕ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಇವರು, ‘ಅಂಬಿನಿಂಗ್ ವಯಸ್ಸಾಯ್ತೋ’ ಸೇರಿದಂತೆ ಕೆಲ ಕನ್ನಡ ಸಿನಿಮಾಗಳಲ್ಲೂ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಗಳಿಗಿಂತ ಹೆಚ್ಚಾಗಿ ಕಿರುತೆರೆಯಲ್ಲೇ ಹೆಚ್ಚು ಜನಪ್ರಿಯತೆಯನ್ನು ಗಳಿಸಿರುವ ಇವರು, ಹಿಂದೆ ಬಾಡಿ ಶೇಮಿಂಗ್ ನಂತಹ ಸವಾಲುಗಳನ್ನು ಎದುರಿಸಿ ಮುನ್ನುಗ್ಗಿದ್ದರು.

ಸಂಪ್ರದಾಯಸ್ಥ ಮಧ್ಯಮ ಕುಟುಂಬದ ಹಿನ್ನೆಲೆಯಿಂದ ಬಂದ ಗೀತಾ ಭಾರತಿ ಭಟ್, ಅಭಿನಯದಲ್ಲಿ ತಮ್ಮ ಚಾತುರ್ಯವನ್ನು ಸಾಬೀತುಪಡಿಸಿದ್ದಾರೆ. ನಟಿಯ ಈ ಶುಭ ಕಾರ್ಯಕ್ಕೆ ಅವರ ಆಪ್ತವರ್ಗ ಹಾಗೂ ಸೀರಿಯಲ್ ಕ್ಷೇತ್ರದ ಗಣ್ಯರು ಸಾಕ್ಷಿಯಾಗಿದ್ದರು. ವಿವಾಹದ ನಂತರವೂ ಗೀತಾ ಭಾರತಿ ಭಟ್ ಅವರು ಸಿನಿಮಾ ಮತ್ತು ಕಿರುತೆರೆ ಕ್ಷೇತ್ರದಲ್ಲಿ ತಮ್ಮ ಪಯಣವನ್ನು ಮುಂದುವರೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

