ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರಮಂದಿರಗಳಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ತೆಲುಗು ಸಿನಿಮಾ ‘ಆಂಧ್ರ ಕಿಂಗ್ ತಾಲೂಕು’ ಇದೀಗ ಡಿಜಿಟಲ್ ವೇದಿಕೆಯಲ್ಲಿ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ರಾಮ್ ಪೋತಿನೇನಿ, ಕನ್ನಡ ನಟ ಉಪೇಂದ್ರ ಹಾಗೂ ಭಾಗ್ಯಶ್ರೀ ಬೋರ್ಸೆ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರ, ನವೆಂಬರ್ 27ರಂದು ಬಿಡುಗಡೆಯಾಗಿತ್ತು. ಉಪೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರಿಂದಲೇ ಚಿತ್ರಕ್ಕೆ ಆರಂಭದಲ್ಲೇ ಸಾಕಷ್ಟು ನಿರೀಕ್ಷೆ ಮೂಡಿತ್ತು.
ಆದರೆ ಬಿಡುಗಡೆಯ ಬಳಿಕ ಚಿತ್ರಕ್ಕೆ ಅತಿಯಾದ ಪ್ರಶಂಸೆ ದೊರಕಲಿಲ್ಲ. ಕಥಾನಕದಲ್ಲಿ ತರ್ಕದ ಕೊರತೆ ಇದೆ ಎಂಬ ಟೀಕೆ ಕೇಳಿಬಂದರೂ, ಆರಂಭಿಕ ದಿನಗಳಲ್ಲಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಚಿತ್ರ ಭಾಗಶಃ ಯಶಸ್ವಿಯಾಯಿತು. ಆದರೂ ವಾರಾಂತ್ಯದ ನಂತರ ಚಿತ್ರಕ್ಕೆ ನಿರೀಕ್ಷಿತ ಬೆಂಬಲ ಸಿಗಲಿಲ್ಲ. 28 ಕೋಟಿ ರೂಪಾಯಿ ಬ್ರೇಕ್‌ಈವನ್ ಗುರಿಯೊಂದಿಗೆ ತೆರೆಕಂಡ ಈ ಚಿತ್ರ, ಸುಮಾರು 17 ಕೋಟಿ ರೂಪಾಯಿ ಮಾತ್ರ ಸಂಗ್ರಹಿಸಿ ವಾಣಿಜ್ಯವಾಗಿ ಹಿನ್ನಡೆ ಅನುಭವಿಸಿತು.
ಇದೀಗ ಚಿತ್ರಕ್ಕೆ ಒಟಿಟಿಯಲ್ಲಿ ಹೊಸ ಅವಕಾಶ ಸಿಕ್ಕಿದೆ. ‘ಆಂಧ್ರ ಕಿಂಗ್ ತಾಲೂಕು’ ಚಿತ್ರದ ಡಿಜಿಟಲ್ ಹಕ್ಕುಗಳನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದ್ದು, ಡಿಸೆಂಬರ್ 25ರಿಂದ ಸ್ಟ್ರೀಮಿಂಗ್ ಆರಂಭವಾಗುವ ಸಾಧ್ಯತೆ ಇದೆ. ಅಧಿಕೃತ ಘೋಷಣೆ ಶೀಘ್ರದಲ್ಲೇ ಹೊರಬೀಳುವ ನಿರೀಕ್ಷೆಯಿದೆ.

