ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದಲ್ಲಿ ಸಿನಿಮಾದ ಟ್ರೇಲರ್ ಗಳೇ ನಿರೀಕ್ಷೆ ಹೆಚ್ಚಿಸುತ್ತವೆ ಎಂದು ಮತ್ತೆ ಸಾಬೀತಾಗಿದೆ. ಬಹುನಿರೀಕ್ಷಿತ ‘45’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಕೆಲವೇ ನಿಮಿಷಗಳಲ್ಲಿ ಪ್ರೇಕ್ಷಕರ ಗಮನ ಸೆಳೆದಿದೆ. ವಿಭಿನ್ನ ಕಥಾವಸ್ತು ಮತ್ತು ದೃಶ್ಯ ವೈಭವದಿಂದ ಟ್ರೇಲರ್ ಚರ್ಚೆಗೆ ಗ್ರಾಸವಾಗಿದ್ದು, ವಿಶೇಷವಾಗಿ ಶಿವರಾಜ್‌ಕುಮಾರ್ ಅವರ ಹೊಸ ಅವತಾರಕ್ಕಫ್ಯಾನ್ಚ್ ಶಾಕ್ ಆಗಿದ್ದು, ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದಾರೆ.
ಈ ವರ್ಷದ ಅತಿ ದೊಡ್ಡ ಯಶಸ್ಸು ಕಂಡ ‘ಸು ಫ್ರಮ್ ಸೋ’ ಸಿನಿಮಾದಲ್ಲಿ ನಾಯಕ ಜೆಪಿ ತುಮ್ಮಿನಾಡು ಸೀರೆ ಉಟ್ಟ ದೃಶ್ಯ ಜನರಲ್ಲಿ ವಿಶೇಷ ಕುತೂಹಲ ಹುಟ್ಟಿಸಿತ್ತು. ಅದೇ ಹಾದಿಯಲ್ಲಿ ‘45’ ಚಿತ್ರದಲ್ಲೂ ಶಿವರಾಜ್‌ಕುಮಾರ್ ಅವರು ಸೀರೆ ಉಟ್ಟು ಕಾಣಿಸಿಕೊಳ್ಳುವುದು ಟ್ರೇಲರ್‌ನ ಪ್ರಮುಖ ಆಕರ್ಷಣೆಯಾಗಿದೆ. ಇಡೀ ಸಿನಿಮಾದಲ್ಲಿ ಈ ದೃಶ್ಯವೇ ಹೈಲೈಟ್ ಎನ್ನಲಾಗುತ್ತಿದೆ.
ಸಂಗೀತ ಸಂಯೋಜಕನಾಗಿ ಖ್ಯಾತಿ ಗಳಿಸಿದ್ದ ಅರ್ಜುನ್ ಜನ್ಯ ಅವರು ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪರಿಚಯವಾಗಿದ್ದು, ಮೊದಲ ಪ್ರಯತ್ನದಲ್ಲೇ ಭರವಸೆ ಮೂಡಿಸಿದ್ದಾರೆ. ಹುಟ್ಟು ಮತ್ತು ಸಾವು ನಡುವಿನ ಜೀವನದ ಅರ್ಥವನ್ನೇ ಕಥೆಯ ಕೇಂದ್ರಬಿಂದುವಾಗಿ ‘45’ ಕಟ್ಟಿಕೊಡುತ್ತದೆ ಎಂಬ ಸೂಚನೆ ಟ್ರೇಲರ್‌ನಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಗ್ರಾಫಿಕ್ಸ್ ಬಳಕೆ ಚಿತ್ರದ ದೃಶ್ಯ ವೈಭವವನ್ನು ಹೆಚ್ಚಿಸಿದ್ದು, ಬಿಡುಗಡೆ ವಿಳಂಬಕ್ಕೆ ಕಾರಣವಾದ ಕೆಲಸಗಳ ಮೌಲ್ಯ ಟ್ರೇಲರ್‌ನಲ್ಲಿ ಗೋಚರಿಸುತ್ತಿದೆ.
ಟ್ರೇಲರ್‌ನಲ್ಲಿ ರಾಜ್ ಬಿ ಶೆಟ್ಟಿ, ಉಪೇಂದ್ರ ಮತ್ತು ಶಿವರಾಜ್‌ಕುಮಾರ್ ಅವರ ಪಾತ್ರಗಳು ಪ್ರಭಾವ ಮೂಡಿಸಿವೆ. ಸಮಾಧಿಯ ಮೇಲೆ ಹುಟ್ಟಿದ ದಿನಾಂಕ ಮತ್ತು ಸಾಯುವ ದಿನಾಂಕದ ಮಧ್ಯೆ ಇರುವ ಸಣ್ಣ ಗೆರೆ ಜೀವನ ಎಂಬ ಉಪೇಂದ್ರ ಡೈಲಾಗ್ ವಿಶೇಷ ಗಮನ ಸೆಳೆದಿದೆ. ಡಿಸೆಂಬರ್ 25ರಂದು ‘45’ ಸಿನಿಮಾ ತೆರೆಗೆ ಬರಲಿದ್ದು, ಈಗಾಗಲೇ ಪ್ರೇಕ್ಷಕರ ನಿರೀಕ್ಷೆ ಗರಿಷ್ಠ ಮಟ್ಟ ತಲುಪಿದೆ.

