Friday, December 19, 2025

ಕೋಳಿಮೊಟ್ಟೆ ಸೇವನೆ ಆತಂಕ ಬೇಡ: ಕ್ಯಾನ್ಸರ್ ವದಂತಿ ತಳ್ಳಿಹಾಕಿದ ಸಚಿವ ದಿನೇಶ್ ಗುಂಡೂರಾವ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೊಟ್ಟೆ ಸೇವನೆಯು ಕ್ಯಾನ್ಸರ್​ಗೆ ಕಾರಣವಾಗುತ್ತದೆ ಎಂಬ ಸಾರ್ವಜನಿಕ ಆತಂಕ ಮತ್ತು ಯೂಟ್ಯೂಬ್ ವದಂತಿಗಳ ಕುರಿತು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರು ಸ್ಪಷ್ಟನೆ ನೀಡಿದ್ದು, ನಾಗರಿಕರು ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಗಳವಾರ ಮೇಲ್ಮನೆಯ ಶೂನ್ಯ ವೇಳೆಯಲ್ಲಿ ಸದಸ್ಯ ರಮೇಶ ಬಾಬು ಅವರು ಕೋಳಿ ಮೊಟ್ಟೆಗಳ ಸುರಕ್ಷತೆ ಕುರಿತು ವಿಷಯ ಪ್ರಸ್ತಾಪಿಸಿದ್ದರು. ಇದಕ್ಕೆ ಉತ್ತರಿಸಿದ ಸಚಿವರು, ಮೊಟ್ಟೆಗಳು ಸುರಕ್ಷಿತ ಮತ್ತು ಗುಣಮಟ್ಟದಿಂದ ಕೂಡಿವೆ ಎಂದು ದೃಢಪಡಿಸಿದರು.

ಸಚಿವರು ನೀಡಿದ ಮಾಹಿತಿ ಪ್ರಕಾರ, “ಕಳೆದ ವರ್ಷ ನಾವು ರಾಜ್ಯದಾದ್ಯಂತ 124 ಮೊಟ್ಟೆಗಳ ಮಾದರಿಗಳನ್ನು ಸಂಗ್ರಹಿಸಿ, ಅವುಗಳನ್ನು ಪರೀಕ್ಷೆಗೆ ಒಳಪಡಿಸಿದ್ದೆವು. ಅದರಲ್ಲಿ 123 ಮೊಟ್ಟೆಗಳ ಫಲಿತಾಂಶವು ಉತ್ತಮವಾಗಿದೆ ಎಂದು ಬಂದಿದೆ. ಜನರು ಈ ಕುರಿತು ಆತಂಕ ಪಡುವ ಅಗತ್ಯವಿಲ್ಲ” ಎಂದು ಹೇಳಿದ್ದಾರೆ.

ಜೊತೆಗೆ, ಖಾಸಗಿ ಕಂಪನಿಯೊಂದರ ಮೊಟ್ಟೆಯ ಮಾದರಿಯನ್ನು ಸಹ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅದರ ವರದಿ ಸಹ ಒಂದೆರಡು ದಿನಗಳಲ್ಲಿ ಬರಲಿದೆ ಎಂದು ಅವರು ವಿವರಿಸಿದರು.

ಯೂಟ್ಯೂಬ್‌ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಮೊಟ್ಟೆಗೆ ಸಂಬಂಧಿಸಿದ ವದಂತಿಗಳಿಗೆ ಸಾರ್ವಜನಿಕರು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಕರ್ನಾಟಕದಲ್ಲಿ ಲಭ್ಯವಿರುವ ಕೋಳಿ ಮೊಟ್ಟೆಗಳು ಸಂಪೂರ್ಣ ಸತ್ವಯುತವಾಗಿವೆ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರು ಸದನದಲ್ಲಿ ಸ್ಪಷ್ಟಪಡಿಸಿದರು.

error: Content is protected !!