ಹೊಸದದಿಗಂತ ಡಿಜಿಟಲ್ ಡೆಸ್ಕ್:
ಫೆಬ್ರವರಿ, ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಬಾಕಿ ವಿಚಾರವು ವಿಧಾನಸಭೆಯಲ್ಲಿಂದು ಭಾರಿ ಗದ್ದಲ, ಕೋಲಾಹಲ ಸೃಷ್ಟಿಸಿ ಅರ್ಧ ದಿನದ ಕಲಾಪವನ್ನೇ ನುಂಗಿ ಹಾಕಿತು. ಕೊನೆಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸದನಕ್ಕೆ ಬಂದು ವಿಷಾದ ಮತ್ತು ಕ್ಷಮೆ ಕೇಳುವಂತೆ ಬಿಜೆಪಿ ಮಾಡಿದ್ದಲ್ಲದೇ, ಎರಡು ತಿಂಗಳ ಗೃಹಲಕ್ಷ್ಮಿ ಬಾಕಿ ವ್ಯತ್ಯಯದ ಬಗ್ಗೆಯೂ ಸದನದಲ್ಲಿ ಸಚಿವೆ ಹೆಬ್ಬಾಳ್ಕರ್ ಒಪ್ಪಿಕೊಂಡರು.
ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ, ವಿಪಕ್ಷ ನಾಯಕ ಆರ್.ಅಶೋಕ್, ಮೂರು ದಿನಗಳಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಾಪತ್ತೆ ಆಗಿದ್ದಾರೆ. ಇಂದು ಮೊದಲು ಸಚಿವರನ್ನು ಕರೆಸಿ ಉತ್ತರ ಕೊಡಿಸಿ, ನಂತರ ಕಲಾಪ ನಡೆಸಿ. ಎರಡು ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿ ಹೋಯಿತು? ಪಕ್ಷದ ಕೆಲಸಗಳಿಗೆ ಹೋಯ್ತಾ? ಸಚಿವರು ಉತ್ತರ ಕೊಡದಿದ್ದರೆ ಧರಣಿ ಮಾಡುತ್ತೇವೆ ಎಂದರು.
ಈ ವೇಳೆ ಸ್ಪೀಕರ್ ಖಾದರ್, ಪ್ರಿಯಾಂಕ್ ಖರ್ಗೆ ಮತ್ತಿತರರು ಪರಿಸ್ಥಿತಿ ಸಂಭಾಳಿಸಲು ಯತ್ನಿಸಿದರೂ ಬಿಜೆಪಿ ಸದಸ್ಯರು ಮಣಿಯಲಿಲ್ಲ. ಸದನದ ಬಾವಿಗಿಳಿದು ಬಿಜೆಪಿ, ಜೆಡಿಎಸ್ ಸದಸ್ಯರು ಧರಣಿ ಶುರು ಮಾಡಿದರು. ಸ್ಪೀಕರ್ ಅವರು ಕಲಾಪವನ್ನು ಹತ್ತು ನಿಮಿಷ ಮುಂದೂಡಿದರು.
ಈ ಮಧ್ಯೆ ಸ್ಪೀಕರ್ ಕೊಠಡಿಯಲ್ಲಿ ಸಚಿವೆ ಹೆಬ್ಬಾಳ್ಕರ್, ಡಿಸಿಎಂ ಡಿ.ಕೆ.ಶಿವಕುಮಾರ್, ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ಚರ್ಚೆ ನಡೆಸಿದರು. ಮಹಿಳಾ/ಕಲ್ಯಾಣ ಇಲಾಖೆ ನಿರ್ದೇಶಕ ಮಹೇಶ್ ಬಾಬು ಅವರನ್ನೂ ಕರೆಸಿ ಡಿಕೆಶಿ ಮಾಹಿತಿ ಪಡೆದರು. ಬಳಿಕ ಮತ್ತೆ ಕಲಾಪ ಆರಂಭವಾಯಿತು.
ಗದ್ದಲ, ಕೋಲಾಹಲ ಸೃಷ್ಟಿಯಾಯಿತು. ಕೊನೆಗೆ ಮತ್ತೆ ಸಚಿವೆ ಹೆಬ್ಬಾಳ್ಕರ್ ಮಾತನಾಡಿ, ನಾನು ವಿಷಾದ ವ್ಯಕ್ತಪಡಿಸುತ್ತೇನೆ ಅಂತ ಹೇಳಿದ್ದೇನೆ. ಆ ಪದ ಇಷ್ಟ ಆಗದಿದ್ದರೆ ಕ್ಷಮೆ ಕೇಳುತ್ತೇನೆ ಎಂದರು. ಮುಂದುವರೆದು, ಆದರೆ ನಾನು ಒಬ್ಬ ಮಹಿಳೆ ಅಂತ ತಾವು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಅಂತ ಹೆಬ್ಬಾಳ್ಕರ್ ಕೌಂಟರ್ ಕೊಟ್ಟರು. ಇದಕ್ಕೂ ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ನಂತರ ಮಾತಾಡಿದ ಅಶೋಕ್, ಸಚಿವರು ವಿಷಯಾಂತರ ಮಾಡುತ್ತಿದ್ದಾರೆ. ಎರಡು ತಿಂಗಳ ಕಂತು ಯಾವಾಗ ಕೊಡುತ್ತೇವೆ ಅಂತ ಸಚಿವರು ಹೇಳಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಚಿವೆಯ ಉತ್ತರಕ್ಕೆ ಸಮಾಧಾನಗೊಳ್ಳದ ವಿಪಕ್ಷಗಳು ಸದನದಿಂದ ಸಭಾತ್ಯಾಗ ಮಾಡಿದವು.

