Friday, December 19, 2025

2025 | ಈ ವರ್ಷ ಸತಿ-ಪತಿಗಳಾಗಿ ಮಿಂಚಿದ ಸಿನಿ ಜೋಡಿಗಳಿವರು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

2025 ಇನ್ನೇನು ಕೆಲವೇ ದಿನಗಳಲ್ಲಿ ಕೊನೆಯಾಗಲಿದೆ. ಈ ವರ್ಷ ಸಿನಿ ಫೀಲ್ಡ್‌ನಲ್ಲಿ ಸಾಕಷ್ಟು ಜೋಡಿಗಳು ಹಸೆಮಣೆ ಏರಿವೆ. ಯಾರೆಲ್ಲಾ? ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್‌..

ಫೆಬ್ರವರಿ 16ರಂದು ಕನ್ನಡ ಚಿತ್ರರಂಗದ ನಟರಾಕ್ಷಸ ಖ್ಯಾತಿಯ ನಟ ಡಾಲಿ ಧನಂಜಯ್ ಮತ್ತು ಗೈನಕಾಲಜಿಸ್ಟ್ ಡಾ.ಧನ್ಯತಾ ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದರು. 2024ರ ದೀಪಾವಳಿ ಸಂಭ್ರಮದಲ್ಲಿ ಧನಂಜಯ್​ ತಮ್ಮ ಬಾಳಸಂಗಾತಿ ಪರಿಚಯಿಸಿದ್ದರು. 

ಕನ್ನಡ ಕಿರುತೆರೆ ಮತ್ತು ಹಿರಿತೆರೆಯ ಖ್ಯಾತ ನಿರೂಪಕಿ ಅನುಶ್ರೀ ಅವರು ಆಗಸ್ಟ್ 28ರಂದು ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಉದ್ಯಮಿ ರೋಷನ್ ಅವರನ್ನು ವಿವಾಹವಾದರು. ವಿವಾಹ ಖಾಸಗಿಯಾಗಿದ್ದರೂ, ಬಹಳ ಸೊಗಸಾದ ಸಮಾರಂಭವಾಗಿತ್ತು. ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಹಾಜರಿದ್ದರು.

ಅಗ್ನಿಸಾಕ್ಷಿ ಧಾರಾವಾಹಿ, ಬಿಗ್​ ಬಾಸ್​ ಮೂಲಕ ಮನೆ ಮಾತಾಗಿದ್ದ ಕನ್ನಡ ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಗೌಡ ಅವರು ಬೆಂಗಳೂರಿನ ಖಾಸಗಿ ರೆಸಾರ್ಟ್​ವೊಂದರಲ್ಲಿ ಜೂನ್​ 4ರಂದು ಏರ್​ಫೋರ್ಸ್ ಆಫೀಸರ್ ಅನುಕೂಲ್ ಮಿಶ್ರಾ ಅವರೊಂದಿಗೆ ಅದ್ಧೂರಿಯಾಗಿ ಹಸೆಮಣೆಯೇರಿದರು. 

ಕನ್ನಡ ನಟಿ ಅರ್ಚನಾ ಕೊಟ್ಟಿಗೆ ಅವರು ಕ್ರಿಕೆಟಿಗ ಬಿಆರ್ ಶರತ್ ಅವರೊಂದಿಗೆ ಏಪ್ರಿಲ್ 23ರಂದು ಹಸೆಮಣೆಯೇರಿದರು. ಡಿಯರ್ ಸತ್ಯ ಚಿತ್ರದ ಮೂಲಕ ಸ್ಯಾಂಡಲ್​ವುಡ್​ ಪ್ರವೇಶಿಸಿದ ಅರ್ಚನಾ ಕೊಟ್ಟಿಗೆ, ಅರಣ್ಯಕಾಂಡ, ಕಟ್ಟಿಂಗ್ ಶಾಪ್​​, ರಕ್ತಾಕ್ಷ, ಹೊಂದಿಸಿ ಬರೆಯಿರಿ, ವಿಜಯಾನಂದ್​, ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ, ತ್ರಿಬಲ್ ರೈಡಿಂಗ್​, ಶಬರಿ ಸರ್ಚಿಂಗ್ ರಾವಣ, ಅಲಂಕಾರ್ ವಿದ್ಯಾರ್ಥಿ, ಫಾರೆಸ್ಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ರೊಮ್ಯಾಂಟಿಕ್ ಹಾಡುಗಳಿಂದಲೇ ಗಮನ‌ ಸೆಳೆದಿರುವ ರಘು ದೀಕ್ಷಿತ್‌ ತಮ್ಮ 50ನೇ ವಯಸ್ಸಿನಲ್ಲಿ ನವಪಯಣ ಆರಂಭಿಸಿದರು. ಗ್ರ್ಯಾಮಿ ನಾಮನಿರ್ದೇಶಿತ ಗಾಯಕಿ ವಾರಿಜಶ್ರೀ ವೇಣುಗೋಪಾಲ್‌ ಅವರ ಜೊತೆ ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಅಕ್ಟೋಬರ್​ 24ರಂದು ಮದುವೆ ಆದರು.

ದಕ್ಷಿಣ ಚಿತ್ರರಂಗದ ಖ್ಯಾತ ನಟಿ ಸಮಂತಾ ರುತ್​ ಪ್ರಭು ಅವರು ಇದೇ ಡಿಸೆಂಬರ್​ 1ರಂದು ನಿರ್ದೇಶಕ ರಾಜ್ ನಿಧಿಮೋರು ಅವರೊಂದಿಗೆ ನವಪಯಣ ಆರಂಭಿಸಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನ ಇಶಾ ಯೋಗ ಸೆಂಟರ್​ನಲ್ಲಿರುವ ಲಿಂಗ ಭೈರವಿ ದೇವಸ್ಥಾನದಲ್ಲಿ ‘ಭೂತ ಶುದ್ಧಿ ವಿಹಾಹ’ ಪದ್ಧತಿಯಲ್ಲಿ ದಾಂಪತ್ಯ ಜೀವನ ಶುರು ಮಾಡಿದ್ರು.

ಜನವರಿ 2ರಂದು ಜನಪ್ರಿಯ ಗಾಯಕ ಅರ್ಮಾನ್ ಮಲಿಕ್ ಮತ್ತು ಇನ್​ಫ್ಲುಯೆನ್ಸರ್ ಆಶ್ನಾ ಶ್ರಾಫ್ ಮದುವೆಯಾದರು. ಅವರ ವಿವಾಹ ಸಮಾರಂಭವು ಹೂವಿನಿಂದ ಅಲಂಕರಿಸಲ್ಪಟ್ಟ ಸುಂದರ ಹೊರಾಂಗಣ ವಾತಾವರಣದಲ್ಲಿ ನಡೆಯಿತು. 7 ವರ್ಷಗಳಿಂದ ಪ್ರೀತಿಯಲ್ಲಿರುವ ಈ ಜೋಡಿ, 2023ರ ಆಗಸ್ಟ್​ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅದ್ಧೂರಿ ವಿವಾಹ ಸಮಾರಂಭದಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.

ಬಾಲಿವುಡ್‌ ನಟಿ ಪ್ರಾಜಕ್ತಾ ಕೋಲಿ ತಮ್ಮ ದೀರ್ಘಕಾಲದ ಬಾಯ್‌ಫ್ರೆಂಡ್‌ ವೃಶಾಂಕ್‌ ಖನಲ್‌ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪ್ರಾಜಕ್ತಾ ಯುಟ್ಯೂಬರ್‌ ಆಗಿದ್ದು, ಮಿಸ್‌ಮ್ಯಾಚ್ಡ್‌ ಸೀರೀಸ್‌ನಿಂದ ಫೇಮ್‌ ಪಡೆದು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.



error: Content is protected !!