Thursday, December 18, 2025

ಬ್ಯಾಂಕ್‌ನಲ್ಲಿ ಗಿರವಿ ಇಟ್ಟ ಚಿನ್ನದಲ್ಲೂ ಗೋಲ್‌ಮಾಲ್‌! ಏಕಾಏಕಿ ಸರ ಮೂರು ಗ್ರಾಮ್‌ ಕಡಿಮೆ ಆಗಿದ್ದು ಹೇಗೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿನ್ನ ಗಿರವಿ ಇಟ್ಟಿದ್ದ ವಿಚಾರದಲ್ಲಿ ಮೋಸ ಆಗಿದೆ ಎಂದು ಮೈಸೂರಿನಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಕಂಪನಿಗಳಲ್ಲಿ ಮೋಸವಾಬಹುದು ಎಂದು ಪ್ರತಿಷ್ಠಿತ ಬ್ಯಾಂಕ್‌ನಲ್ಲಿ‌ ಗಿರವಿ ಇಟ್ಟಿದ್ದು, ಅಲ್ಲಿಯೇ ಮೋಸವಾಗಿದೆ ಎಂದು ಜನ ಗರಂ ಆಗಿದ್ದಾರೆ.

ಮೈಸೂರಿನ ಹಿನಕಲ್ ಗ್ರಾಮದ ಕೆನರಾ ಬ್ಯಾಂಕ್‌ನಲ್ಲಿ ಇಟ್ಟಿರುವ ಗೋಲ್ಡ್‌ನಲ್ಲಿ ಗೋಲ್‌ಮಾಲ್‌ ಆಗಿದೆ ಎಂದು ಜನ ಹೇಳಿದ್ದಾರೆ. ಚಿನ್ನವನ್ನು ಗ್ರಾಹಕರಿಗೆ ವಾಪಸ್​​ ನೀಡುವ ಸಂದರ್ಭದಲ್ಲಿ ಮೋಸ ಮಾಡಲಾಗಿದೆ ಎಂಬುದು ಗ್ರಾಹಕರ ಆರೋಪ. ಈ ಹಿನ್ನೆಲೆಯಲ್ಲಿ ನೂರಾರು ಗ್ರಾಹಕರು ಇಂದು ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.

ಪ್ರಮುಖವಾಗಿ ಹಿನಕಲ್ ಗ್ರಾಮದ ಲಾವಣ್ಯ ಎಂಬುವರು 56 ಗ್ರಾಂ ತೂಕದ ಚಿನ್ನದ ನೆಕ್ಲೆಸ್‌, ದೊಡ್ಡ ಹಾರ, ಚಿಕ್ಕ ಹಾರ ಹಾಗೂ ಬಳೆಗಳನ್ನು ಬ್ಯಾಂಕ್‌ನಲ್ಲಿ ಗಿರವಿ ಇಟ್ಟಿದ್ದರು‌. ಎರಡು ದಿನಗಳ ಹಿಂದೆ ಅದನ್ನು ಬಿಡಿಸಿಕೊಂಡಿದ್ದರು. ಅವರು ಬಿಡಿಸಿಕೊಂಡ ಚಿನ್ನ ಅಷ್ಟೇ ಪ್ರಮಾಣದಲ್ಲಿ ಇತ್ತು. ಆದರೆ ಸರವನ್ನು ಧರಿಸುವ ವೇಳೆ ಚಿಕ್ಕದಾಗಿ ಕಾಣಿಸಿದೆ. ಅನುಮಾನ ಬಂದು ಸರವನ್ನು ಪರಿಶೀಲನೆ ಮಾಡಿದ್ದಾರೆ. ಆಗ ಮೋಸವಾಗಿರುವುದು ಗೊತ್ತಾಗಿದೆ.

ಲಾವಣ್ಯ ಅವರು ಚಿನ್ನ ಅಡಮಾನ ಮಾಡುವ ವೇಳೆ ಅದರ ಫೋಟೋ ತೆಗೆದುಕೊಂಡಿದ್ದರು, ಅದನ್ನ ಬಿಡಿಸಿಕೊಂಡ ಚಿನ್ನದ ಸರದ ಜೊತೆಗೆ ತಾಳೆ ಹಾಕಿದ್ದಾರೆ. ಮೊದಲು 81 ಗುಂಡುಗಳನ್ನು ಒಳಗೊಂಡಿದ್ದ ಸರ, ಈಗ ಕೇವಲ‌ 73 ಗುಂಡುಗಳನ್ನು ಒಳಗೊಂಡಿದೆಯಂತೆ. ಇದನ್ನು ಬಂದು ಬ್ಯಾಂಕ್‌ನಲ್ಲಿ ವಿಚಾರಿಸಿದಾಗ ಆರಂಭದಲ್ಲಿ ಸರಿಯಾದ ಉತ್ತರ ನೀಡಲಿಲ್ಲವಂತೆ. ನಂತರ ತಪ್ಪು ಸರಿ ಪಡಿಸುತ್ತೇವೆ ಅಂತ ಹಾರಿಕೆ ಉತ್ತರ ನೀಡಿದ್ದಾರೆ ಎನ್ನುವುದು ಅವರ ಆರೋಪವಾಗಿದೆ.

ಕೆನರಾ ಬ್ಯಾಂಕ್​ ಪ್ರಾದೇಶಿಕ ವ್ಯವಸ್ಥಾಪಕ ರಾಜಶೇಖರ್ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಆಂತರಿಕ ತನಿಖೆ ಮಾಡುವುದಾಗಿ ತಿಳಿಸಿದ್ದಾರೆ. ಗ್ರಾಹಕರು ಆರೋಪ ಮಾಡಿರುವಂತೆ ಬ್ಯಾಂಕ್​ನಲ್ಲಿ ಯಾವುದೇ ಮೋಸ ಆಗುವುದಿಲ್ಲ. ಆದರೆ ಗ್ರಾಹಕರು ನಮಗೆ ಬಹಳ ಮುಖ್ಯ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಗ್ರಾಹಕರ ದೂರು ಆಧಾರಿಸಿ ತನಿಖೆ ಮಾಡಲಾಗುವುದು. ಅಕ್ಕಸಾಲಿಗ ಅಶ್ವಿನ್ ವಿರುದ್ಧ ಯಾವುದೇ ಲಿಖಿತ ದೂರು ಬಂದಿಲ್ಲ. ಆತ ಚಿನ್ನ ಮೌಲ್ಯಮಾಪನ ಮಾಡಿಕೊಟ್ಟು ಹೋಗುತ್ತಿದ್ದ. ಇಂತಹ ಪ್ರಕರಣ ಇದೇ ಮೊದಲಿಗೆ ಬೆಳಕಿಗೆ ಬಂದಿದ್ದು, ತಪ್ಪಾಗಿದ್ದರೆ ಬ್ಯಾಂಕ್ ನಿಯಮಗಳ ಪ್ರಕಾರ ಗ್ರಾಹಕರಿಗೆ ನ್ಯಾಯ ಕೊಡಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

error: Content is protected !!