ಹೊಸದಿಗಂತ ಡಿಜಿಟಲ್ ಡೆಸ್ಕ್:
ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಸಿನಿಮಾ ಕುರಿತಾಗಿ ಅಭಿಮಾನಿಗಳಲ್ಲಿ ದಿನೇದಿನೆ ಹೆಚ್ಚುತ್ತಿರುವ ಕುತೂಹಲದ ನಡುವೆ ಈಗ ಅಚಾನಕ್ ಹೊಸ ಚರ್ಚೆ ಶುರುವಾಗಿದೆ. ಎಚ್. ವಿನೋದ್ ನಿರ್ದೇಶನದ ಈ ಚಿತ್ರವನ್ನು ವಿಜಯ್ ಅವರ ಕೊನೆಯ ಸಿನಿಮಾ ಎಂದು ಹೇಳಲಾಗುತ್ತಿರುವ ಕಾರಣ, ಬಿಡುಗಡೆಗೂ ಮುನ್ನವೇ ಭಾರೀ ನಿರೀಕ್ಷೆ ನಿರ್ಮಾಣವಾಗಿತ್ತು. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಮತ್ತು ಟೀಸರ್‌ಗಳು ಉತ್ತಮ ಪ್ರತಿಕ್ರಿಯೆ ಪಡೆದಿದ್ದು, ಅನಿರುದ್ ರವಿಚಂದ್ರನ್ ಅವರ ಸಂಗೀತ ಮತ್ತೊಮ್ಮೆ ಗಮನ ಸೆಳೆದಿದೆ.
ಜನವರಿ 9ರಂದು ಸಿನಿಮಾ ತೆರೆಗೆ ಬರಲಿದೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ದಿನ ಎಣಿಸುತ್ತಿದ್ದ ವೇಳೆ, ಇದೀಗ ಆ ದಿನಾಂಕಕ್ಕೆ ಚಿತ್ರ ಬಿಡುಗಡೆಯಾಗುವುದಿಲ್ಲ ಎಂಬ ಮಾತುಗಳು ಹರಿದಾಡುತ್ತಿವೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿ ಚಿತ್ರತಂಡ ಅಥವಾ ನಿರ್ಮಾಣ ಸಂಸ್ಥೆ ಕೆವಿಎನ್ ಬ್ಯಾನರ್ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಬಿಡುಗಡೆ ದಿನಾಂಕ ಬದಲಾಗುತ್ತದೆಯೇ ಅಥವಾ ವದಂತಿಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.

