ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾ ಗೌಡ ಅವರು ನಟ ದರ್ಶನ್ ಅವರನ್ನು ಭೇಟಿ ಮಾಡಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಆದರೆ, ದರ್ಶನ್ ಮಾತ್ರ ಪವಿತ್ರಾ ಅವರ ಮುಖ ನೋಡಲು ಸಹ ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. ಜೈಲು ಸೇರಿದ ನಂತರ ಇಬ್ಬರ ನಡುವೆ ಯಾವುದೇ ಸಂವಹನ ನಡೆದಿಲ್ಲ.
ಇತ್ತೀಚೆಗೆ ಕಾರಾಗೃಹಕ್ಕೆ ಭೇಟಿ ನೀಡಿದ್ದ ಡಿಜಿಪಿ ಅಲೋಕ್ ಕುಮಾರ್ ಅವರ ಬಳಿ ಪವಿತ್ರಾ ಗೌಡ ಅವರು ದರ್ಶನ್ ಭೇಟಿಗೆ ಅವಕಾಶ ಕೋರಿದ್ದರು. ಕಾನೂನು ಚೌಕಟ್ಟಿನಲ್ಲಿ ಪರಿಶೀಲಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದರೆ, ಈ ಪ್ರಕ್ರಿಯೆಗೆ ಸ್ವತಃ ದರ್ಶನ್ ಅವರೇ ಅಡ್ಡಗಾಲು ಹಾಕಿದ್ದಾರೆ ಎನ್ನಲಾಗುತ್ತಿದೆ. “ನಿನ್ನಿಂದಲೇ ನಾನು ಈ ಸ್ಥಿತಿಗೆ ತಲುಪುವಂತಾಯಿತು” ಎಂಬ ಆಕ್ರೋಶ ದರ್ಶನ್ ಅವರಲ್ಲಿ ಮನೆ ಮಾಡಿದ್ದು, ಭೇಟಿಗೆ ಬರುವವರ ಬಳಿ ಕೇವಲ ಕೇಸಿನ ಕಾನೂನು ಹೋರಾಟದ ಬಗ್ಗೆ ಮಾತ್ರ ಚರ್ಚಿಸುತ್ತಿದ್ದಾರೆ.
ಒಂದೊಮ್ಮೆ ಅತ್ಯಂತ ಆಪ್ತರಾಗಿದ್ದ ಈ ಜೋಡಿ, ಈಗ ಪರಸ್ಪರ ಮಾತನಾಡದ ಸ್ಥಿತಿಗೆ ತಲುಪಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಟ್ರಯಲ್ ಈಗಾಗಲೇ ಆರಂಭವಾಗಿದ್ದು, ಡಿಸೆಂಬರ್ 17 ರಂದು ಮೃತನ ಪೋಷಕರ ವಿಚಾರಣೆ ನಡೆಸಲಾಗಿದೆ. ನೂರಾರು ಸಾಕ್ಷಿಗಳ ವಿಚಾರಣೆ ಬಾಕಿ ಇರುವ ಈ ನಿರ್ಣಾಯಕ ಹಂತದಲ್ಲಿ, ಪವಿತ್ರಾ ಗೌಡ ಅವರೊಂದಿಗಿನ ಸಂಪರ್ಕ ಕಡಿದುಕೊಳ್ಳಲು ದರ್ಶನ್ ನಿರ್ಧರಿಸಿದಂತಿದೆ.

