ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿಯ ಸಮೀಪ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ನ (ಬಿಐಎಎಲ್) ಅನುಮತಿ ಬೇಕೆನ್ನುವುದು ನಮ್ಮ ಅರಿವಿನಲ್ಲಿದೆ. ಇದಕ್ಕೆ 2033ರವರೆಗೂ ಕಾಲಾವಕಾಶವಿದೆ. ಹೀಗಾಗಿಯೇ, ದೂರದೃಷ್ಟಿ ಇಟ್ಟುಕೊಂಡು ಈಗಿನಿಂದಲೇ ಉಳಿದ ಕೆಲಸಗಳನ್ನು ನಾವು ಆರಂಭಿಸಿದ್ದೇವೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ ಶುಕ್ರವಾರ ಹೇಳಿದ್ದಾರೆ.
ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕುರಿತು ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ದೇವನಹಳ್ಳಿಯ ಸಮೀಪದಲ್ಲಿ ಈಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಕ್ರಿಯವಾಗಿದೆ. ಇದು ಆರಂಭವಾಗುವಾಗಲೇ 2033ರವರೆಗೂ 150 ಕಿ.ಮೀ. ಸುತ್ತಮುತ್ತಲಿನ ಪ್ರದೇಶದಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಬಾರದೆಂಬ ಷರತ್ತು ಇದೆ. ಏತನ್ಮಧ್ಯೆ ಹೊಸದೆಹಲಿ ಮತ್ತು ನವೀ ಮುಂಬೈಗಳಲ್ಲಿ ಇಂತಹ ಷರತ್ತುಗಳನ್ನು ಸಡಿಲಿಸಿ, ಎರಡನೆಯ ಏರ್ಪೋರ್ಟುಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದನ್ನು ಸಂದರ್ಭ ನೋಡಿಕೊಂಡು ಬಗೆಹರಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

