ಹೊಸದಿಗಂತ ವರದಿ ಕಾರವಾರ :
ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸೀಬರ್ಡ್ ನೌಕಾನೆಲೆ ಭೂಸ್ವಾಧೀನ ಪ್ರಕ್ರಿಯೆಯ 28 (ಎ) ಪ್ರಕರಣಗಳ ಅಡಿಯಲ್ಲಿ ನಿರಾಶ್ರಿತರಿಗೆ ಸಿಗಬೇಕಾದ ಹೆಚ್ಚುವರಿ ಪರಿಹಾರದ ವಿಳಂಬಕ್ಕೆ ಇದೀಗ ಶಾಶ್ವತ ಪರಿಹಾರ ಸಿಗುತ್ತಿದೆ. ಭೂ ಮಾಲೀಕರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಹಣವನ್ನು ಶೀಘ್ರವಾಗಿ ತಲುಪಿಸುವ ನಿಟ್ಟಿನಲ್ಲಿ ನಾವು ನಡೆಸಿದ ವಿಶೇಷ ಪ್ರಯತ್ನಗಳ ಫಲವಾಗಿ ಈ ಪ್ರಕ್ರಿಯೆ ಈಗ ಯಶಸ್ಸಿನ ಹಾದಿಯಲ್ಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಈ ಕುರಿತಾಗಿ ಹೇಳಿಕೆ ನೀಡಿರುವ ಅವರು, ಒಟ್ಟು ಬಾಕಿ ಉಳಿದಿರುವ 256 ಪ್ರಕರಣಗಳ ಪೈಕಿ, ಈಗಾಗಲೇ ಮೊದಲ ಹಂತದಲ್ಲಿ 57 ಪ್ರಕರಣಗಳಿಗೆ ಸಂಬಂಧಿಸಿದಂತೆ 10 ಕೋಟಿ ರೂಪಾಯಿ ಪರಿಹಾರ ಧನವನ್ನು ಮಂಜೂರು ಮಾಡಿ ನೇರವಾಗಿ ಭೂಮಾಲೀಕರ ಖಾತೆಗಳಿಗೆ ಜಮಾ ಮಾಡಲಾಗಿದೆ. ಇದರ ಮುಂದುವರಿದ ಭಾಗವಾಗಿ, ಇಂದು ದಿನಾಂಕ 19-12-2025 ರಂದು ಮತ್ತೆ 116 ಪ್ರಕರಣಗಳಿಗೆ ಒಟ್ಟು 27,66,93,397 ರೂಪಾಯಿಗಳ ಬೃಹತ್ ಮೊತ್ತದ ಹಣ ಬಿಡುಗಡೆಯಾಗಿದೆ.
ಸೀಬರ್ಡ್ ನಿರಾಶ್ರಿತರ ಹಿತದೃಷ್ಟಿಯಿಂದ ಉಳಿದಿರುವ ಪ್ರಕರಣಗಳನ್ನು ಸಹ ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಿ, ಬಾಕಿ ಇರುವ ಎಲ್ಲಾ ಭೂಮಾಲೀಕರಿಗೆ ಅತೀ ಶೀಘ್ರದಲ್ಲಿ ಪರಿಹಾರ ದೊರಕಲಿದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಅವರಿಗೆ ಹಾಗೂ ಈ ಪ್ರಕ್ರಿಯೆಗೆ ವಿಶೇಷ ಮುತುವರ್ಜಿ ವಹಿಸಿ ಸಹಕರಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅದರಂತೆ, ಈ ಪ್ರಕ್ರಿಯಲ್ಲಿ ನ್ಯಾಯ ಒದಗಿಸಲು ಶ್ರಮಿಸಿದ ಸೀಬರ್ಡ್ ಯೋಜನೆಯ ಅಧಿಕಾರಿ ವರ್ಗಕ್ಕೆ ಹಾಗೂ ಜಿಲ್ಲಾಡಳಿತಕ್ಕೂ ನನ್ನ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದ್ದಾರೆ.
ಸೀಬರ್ಡ್ ನೌಕಾನೆಲೆ ಭೂಸ್ವಾಧೀನ | ಶೀಘ್ರ ಪರಿಹಾರ ಸಿಗಲಿದೆ ಎಂದ ವಿಶ್ವೇಶ್ವರ ಹೆಗಡೆ ಕಾಗೇರಿ

