ಹೊಸದಿಗಂತ ಡಿಜಿಟಲ್ ಡೆಸ್ಕ್:
ಗರುಡುಪಾಳ್ಯ ಗ್ರಾಮದಲ್ಲಿ ಒಂದು ಇಂಚು ಭೂಮಿ ಒತ್ತುವರಿ ಮಾಡಿಲ್ಲ. ನಾನು ತನಿಖೆಗೆ ಸಿದ್ಧನಿದ್ದು, ಶಿಫಾರಸು ಮಾಡಿ ಎಂದು ಸಚಿವ ಕೃಷ್ಣಬೈರೇಗೌಡ ಅವರು ಸ್ಪೀಕರ್ ಯು.ಟಿ.ಖಾದರ್ಗೆ ಮನವಿ ಮಾಡಿದರು.
ವಿಧಾನಸಭೆಯಲ್ಲಿ ತಮ್ಮ ಮೇಲೆ ಬಂದಿರುವ ಕೆರೆ, ಸ್ಮಶಾನ ಒತ್ತುವರಿ ಆರೋಪ ಸಂಬಂಧ ದಾಖಲೆ ಸಮೇತ ಸಚಿವ ಕೃಷ್ಣಬೈರೇಗೌಡ ಸ್ಪಷ್ಟನೆ ನೀಡಿದರು. ಗರುಡುಪಾಳ್ಯ ಗ್ರಾಮ ಮೈಸೂರು ಮಹಾರಾಜರ ಮನೆತನಕ್ಕೆ ಸೇರಿದ ಗ್ರಾಮ. 1923 ರಲ್ಲಿ ಮಹಾರಾಜರು ಖರೀದಿ ಮಾಡಿದ್ದರು. ಆಗ ಕೃಷಿ ತರಬೇತಿ ಕೇಂದ್ರ ನಡೆಯುತ್ತಿತ್ತು. ಮಹಾರಾಜರೇ 1953ರಲ್ಲಿ ಇದನ್ನು ನಮ್ಮ ತಾತ ಚೌಡೇಗೌಡ ಅವರಿಗೆ 10 ವರ್ಷಕ್ಕೆ ಲೀಸ್ಗೆ ಕೊಟ್ಟಿದ್ದರು. ಅಲ್ಲಿಂದ ಇಲ್ಲಿವರೆಗೆ ಆ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದೇವೆ. ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಅವರ ಟ್ರಸ್ಟ್ಗೆ ಸೇರಿದ ಜಮೀನು ಇದು. ಅವರ ಪರವಾಗಿ ಅಂದಿನ ರಾಜರ ಕಾರ್ಯದರ್ಶಿ ಅಧಿಕಾರಿ ನಾರಾಯಣಸ್ವಾಮಿ ಎಂಬವರು ಲೀಸ್ಗೆ ನಮ್ಮ ತಾತಗೆ ಕೊಟ್ಟಿದ್ದಾರೆ ಎಂದು ವಿವರಿಸಿದರು.
ಲೀಸ್ ಅವಧಿ ಮುಗಿಯುವ ಮೊದಲೇ ರಾಜಮನೆತನದವರು ಅದನ್ನು ಮಾರಾಟ ಮಾಡಲು ಮುಂದಾಗುತ್ತಾರೆ. ನಮ್ಮ ಹಣವಿಲ್ಲದ ಕಾರಣ ನಮ್ಮ ತಾತ ಖರೀದಿ ಮಾಡಲು ಆಗಿಲ್ಲ. 1959ರಲ್ಲಿ ಹಬೀಬುಲ್ಲಾ ಖಾನ್ಗೆ ಮಹಾರಾಜರು ಅದನ್ನು ಮಾರಾಟ ಮಾಡುತ್ತಾರೆ. ಅದರ ವಿರುದ್ಧ ನಮ್ಮ ತಾತ ಸ್ಪೆಷಲ್ ಡಿಸಿ ಬಳಿ ಕೇಸ್ ಹಾಕ್ತಾರೆ. ಸ್ಪೆಷಲ್ ಡಿಸಿ ಅವರು ಹಬೀಬುಲ್ಲಾ ಖಾನ್ ಆ ಜಮೀನಿನ ಮಾಲೀಕರು ಅಂಥ ಆದೇಶ ಮಾಡುತ್ತಾರೆ. ವಿಶೇಷ ಡಿಸಿ ಗರುಡಪಾಳ್ಯ ಒನ್ ಮ್ಯಾನ್ ಹೋಲ್ಡಿಂಗ್ ಎಂದು ಆದೇಶ ಮಾಡುತ್ತಾರೆ. ಅಂದರೆ ಇಡೀ ಊರು ಒಬ್ಬ ವ್ಯಕ್ತಿಯ ಮಾಲಿಕತ್ವ ಎಂದು ಅರ್ಥ. ಜೊತೆಗೆ ಇದು ಬೇಚರಾಕ್ ಗ್ರಾಮ ಅಂತ ಅಂದರೆ ಯಾರೂ ವಾಸ ಮಾಡದ ಗ್ರಾಮ ಎಂದು ಆದೇಶದಲ್ಲಿ ಬರೆದಿದ್ದಾರೆ ಎಂದು ತಿಳಿಸಿದರು.
ಈ ಆದೇಶ ಪ್ರಶ್ನಿಸಿ ನಮ್ಮ ತಾತ ಚೌಡೇಗೌಡರು ಮೈಸೂರು ಅಪಿಲೇಟ್ ನ್ಯಾಯಾಧೀಕರಣದಲ್ಲಿ ಕೇಸ್ ಹಾಕುತ್ತಾರೆ. ಚೌಡೇಗೌಡರು ಹಾಗೂ ಹಬೀಬುಲ್ಲಾ ಖಾನ್ ಅವರು ರಾಜಿ ಮಾಡಿದ ಬಳಿಕ ಆ ಜಮೀನು ಚೌಡೇಗೌಡರಿಗೆ ಬರುತ್ತದೆ. ಆ ಗ್ರಾಮದಲ್ಲಿನ 133.13 ಎಕರೆ ಒಣ ಹಾಗೂ 18.35 ಎಕರೆ ಹಸಿ ಮತ್ತು 21.21 ಎಕರೆ ಗಾರ್ಡನ್, 82.20 ಎಕರೆ ವ್ಯವಸಾಯ ಮಾಡದ ಭೂಮಿ ಸೇರಿ ಗ್ರಾಮದ ಸಂಪೂರ್ಣ ಸರ್ವೆ ನಂಬರ್ಗಳು 256.9 ಎಕರೆ ಭೂಮಿ ಕ್ರಯಪತ್ರ ಆಗಿದೆ. ಮಹಾರಾಜರು ಸಂಪೂರ್ಣ ಗ್ರಾಮವನ್ನು ಮಾರಾಟ ಮಾಡಿದ್ದಾರೆ. 82.20 ಎಕರೆ ವ್ಯವಸಾಯ ಮಾಡದ ಭೂಮಿಯಲ್ಲಿ ಎರಡು ಕೆರೆ ಇದೆ. ಊರು ಸೇರಿದೆ. ಕಲ್ಲು ಗುಡ್ಡವೂ ಸೇರಿದೆ. ಇದೆಲ್ಲವೂ ಮಾರಾಟವಾಗಿದೆ. ಅಲ್ಲಿಂದ ಅದು ನಮಗೆ ಬಂದಿದೆ. ಕ್ರಯ ಪತ್ರದಲ್ಲಿ ಈ ಎಲ್ಲಾ ಭೂಮಿ ಕ್ರಯ ಆಗಿದೆ ಎಂದರು.

